ಸ್ನೇಹಕೂಟಕ್ಕೆ ಕೈ ನಾಯಕರಿಂದ ಅಡ್ಡಿ
ಬಳ್ಳಾರಿ: ಮೇ 13ರಂದು ನಡೆಯಬೇಕಿದ್ದ ಸ್ನೇಹಕೂಟ, ಪೂಜಾ ಕಾರ್ಯಕ್ರಮ ರದ್ದಾಗಲು ಕಾಂಗ್ರೆಸ್ ಮುಖಂಡ ಕೆ.ಸಿ. ಕೊಂಡಯ್ಯ ಕಾರಣ. ರೆಡ್ಡಿ ಸಮಾಜ ತುಳಿಯುವ ಪ್ರಯತ್ನ ಇದು ಎಂದು ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಆರೋಪಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 13ರಂದು ತಾಲೂಕಿನ ಸಿಂಧವಾಳ ಕ್ರಾಸ್ ಸಮೀಪದ ಗಾದಿಲಿಂಗಪ್ಪ ತಾತನವರ ದೇವಸ್ಥಾನದಲ್ಲಿ ಸ್ನೇಹಕೂಟ, ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಪರವಾನಗಿ ನೀಡುವಂತೆ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಅವರು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಪರವಾನಗಿ ನೀಡುವುದಾಗಿ ಏ. 25ರಂದು ಹೇಳಿದ್ದರು. ಆ ಬಳಿಕ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲಾಗಿತ್ತು. ಪೊಲೀಸ್ ಇಲಾಖೆಯಿಂದಲೂ ಅನುಮತಿ ಪಡೆಯಲಾಗಿತ್ತು. ಆದರೆ ಕಾಂಗ್ರೆಸ್ ಮುಖಂಡರು ದುರುದ್ದೇಶದಿಂದ, ಅಧಿಕಾರಿಗಳ ಮೇಲೆ ಒತ್ತಡ ತಂದು ಕಾರ್ಯಕ್ರಮ ರದ್ದುಪಡಿಸುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕಾರ್ಯಕ್ರಮಕ್ಕೆ ಅವಕಾಶವಿಲ್ಲ ಎಂದು ಮೊದಲೇ ಹೇಳಿದ್ದರೆ, ಕಾರ್ಯಕ್ರಮವನ್ನು ಆಯೋಜಿಸುತ್ತಿರಲಿಲ್ಲ, ಲಕ್ಷಾಂತರ ರು. ಖರ್ಚು ಮಾಡಿ ಸಿದ್ಧತೆ ನಡೆಸಿದ್ದೆವು. ಆದರೆ ಮೇ 12ರಂದು ರಾತ್ರಿ 7.30ಕ್ಕೆ ಕಾರ್ಯಕ್ರಮ ನಡೆಸುವಂತಿಲ್ಲ ಎಂದು ನೋಟಿಸ್ ನೀಡಿರುವುದು ಎಷ್ಟು ಸರಿ ಎಂದರು.
ಕಾಂಗ್ರೆಸ್ ಮುಖಂಡರು ಅಧಿಕಾರಗಳ ಮೇಲೆ ರಾಜಕೀಯ ಒತ್ತಡ ಹೇರಿದ್ದಾರೆ. ಇದಕ್ಕೆ ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಕೆ.ಸಿ. ಕೊಂಡಯ್ಯ ಅವರೇ ಕಾರಣ. ಕೆ.ಸಿ. ಕೊಂಡಯ್ಯ ಅವರ ಅಣತಿಯಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಅಲ್ಲಂ ವೀರಭದ್ರಪ್ಪ ಅವರು ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಪರವಾನಗಿ ಹೇಗೆ ನೀಡಿದರು? ಎಂದರು.
ಕೆ.ಸಿ. ಕೊಂಡಯ್ಯ ಚುನಾವಣೆ ಸಂದರ್ಭದಲ್ಲಿ ಕಂಪ್ಲಿ ಭಾಗದಲ್ಲಿ ರೆಡ್ಡಿ ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಆದರೆ ಚುನಾವಣೆ ಸಂದರ್ಭವಾಗಿದ್ದರಿಂದ ನಾವು ಪ್ರತ್ಯುತ್ತರ ನೀಡಿಲ್ಲ. ರಾಜಕೀಯ ಲಾಭಕ್ಕಾಗಿ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಅವರು ಆಟವಾಡುತ್ತಿದ್ದಾರೆ. ಬೇರೆಯವರು ಮರಳು ಗಣಿಗಾರಿಕೆ ಮಾಡಿದರೆ ಅದು ಕಾನೂನು ಬಾಹಿರ, ಆದರೆ ಅವರು ಮಾಡಿದರೆ ಅದು ಕಾನೂನಾತ್ಮಕ ಎಂಬ ನೀತಿ ಅನುಸರಿಸುತ್ತಿದ್ದಾರೆ.
ಅಧಿಕಾರಿಗಳ ಮಾತಿಗೆ ಗೌರವ ಕೊಟ್ಟು ಕಾರ್ಯಕ್ರಮ ನಿಲ್ಲಿಸಿದ್ದೇವೆ. ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂದು ನ್ಯಾಯವಾದಿಗಳೊಂದಿಗೆ ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.
--