ಅಂಧನ ಅದ್ಭುತ ಸಾಧನೆ
ವಿಶೇಷ ವರದಿ
ಹಾನಗಲ್ಲ: ಅಂಗವಿಕಲತೆ ಸಾಧನೆಗೆ ಅಡ್ಡಿಯಾಗದು ಎಂಬ ಸಂದೇಶ ಸಾರಿದ ಹಾನಗಲ್ಲಿನ ವಿದ್ಯಾರ್ಥಿ ಸಿದ್ದೇಶ್ವರ ಕಂಕಾಳೆ ಪಿಯುಸಿಯಲ್ಲಿ ಶೇ. 89.83 ಅಂಕ ಪಡೆದು ಅಂಧ ವಿದ್ಯಾರ್ಥಿಗಳಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.
ಆರನೇ ತರಗತಿ ವೇಳೆಗೆ ಸಂಪೂರ್ಣ ಅಂಧತ್ವ ಆವರಿಸಿದ ಮೇಲೆ ಬ್ರೈಲ್ ಲಿಪಿಯನ್ನು ಆಧರಿಸಿ ವಿದ್ಯಾಭ್ಯಾಸ ಮಾಡುತ್ತಿರುವ ಸಿದ್ದೇಶ್ವರಗೆ ಐಎಎಸ್ ಮಾಡುವಾಸೆ ಇದೆ.
ಹಾನಗಲ್ಲಿನ ಸಿದ್ದೇಶ್ವರ ಬಸಪ್ಪ ಕಂಕಾಳೆಗೆ ಐವರು ಅಕ್ಕಂದಿರು. ಬಾಲ್ಯದಲ್ಲೇ ತಂದೆಯನ್ನು ಕಳಕೊಂಡ. ಇಲ್ಲಿನ ಸರ್ಕಾರಿ ಮಾದರಿ ಶಾಲೆಯಲ್ಲಿ 6ನೇ ತರಗತಿ ಓದುವ ಹೊತ್ತಿಗೆ ಸ್ವಲ್ಪ ಸ್ವಲ್ಪ ಕಾಣುತ್ತಿದ್ದ ದೃಷ್ಟಿಯೂ ಹೋಗಿದ್ದು ದುರ್ದೈವ. ಆಮೇಲೆ ಮುಂಡಗೋಡ ಪಟ್ಟಣದ ಜ್ಞಾನಪ್ರಜ್ಞಾ ಅಂಧರ ವಸತಿ ಶಾಲೆಯಲ್ಲಿ 1ರಿಂದ 9ನೇ ತರಗತಿ ವರೆಗೆ ಬ್ರೈಲ್ ಲಿಪಿಯಲ್ಲಿ ಅಭ್ಯಾಸ ಮಾಡಿದ. ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನೂ ಸಹಾಯಕ ಲಿಪಿಕರ ಸಹಾಯದಿಂದ ಬರೆದು ಶೇ. 91 ಅಂಕ ಗಳಿಸಿದ್ದ.
ಸಾಧನೆಯ ಹಾದಿ: ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪಿಯುಸಿಗೆ ಪ್ರವೇಶ ಪಡೆದರೂ ವಸತಿ ವ್ಯವಸ್ಥೆ ಆಗದೆ ಹಾನಗಲ್ಲಿಗೆ ಮರಳಿದ ಸಿದ್ದೇಶ್ವರ, ಕಾಲೇಜಿನ ಪಾಠಗಳನ್ನು ಮನೆಯಲ್ಲೇ ಕಲಿತು, ಪರೀಕ್ಷೆಗಷ್ಟೇ ಹಾಜರಾದ. ದ್ವಿತೀಯ ಪಿಯುಸಿ ಅಧ್ಯಯನಕ್ಕೆ ಮುಂಡಗೋಡ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಸೇರಿದ. ಅಲ್ಲಿನ ಲೋಯಲಾ ಸಂಸ್ಥೆಯಲ್ಲಿ ಆಶ್ರಯ ಪಡೆದ. ಪಿಯುಸಿ ಪರೀಕ್ಷೆಯನ್ನೂ ಲಿಪಿಕರ ಸಹಾಯದಿಂದಲೇ ಬರೆದು, ಅಂಧರ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.
ಕೀಳರಿಮೆ ಇಲ್ಲ: ಧಾರವಾಡದ ವಿದ್ಯಾಪೋಷಕ ಸಂಸ್ಥೆ ಬಿಟ್ಟರೆ, ಸರ್ಕಾರ ಅಥವಾ ಸಂಘ-ಸಂಸ್ಥೆಗಳು ನೆರವು ನೀಡಿಲ್ಲ. ಎಷ್ಟೇ ಕಷ್ಟವಾದರೂ ಐಎಎಸ್ ಓದುತ್ತೇನೆ. ಅಂಧ ಎನ್ನುವ ಕೀಳರಿಮೆ ನನಗಿಲ್ಲ. ಚೆನ್ನಾಗಿ ಓದುತ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾನೆ, ಸಿದ್ದೇಶ್ವರ.
ಅಂಧರ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೂರು ಬಾರಿ, ಚೆಸ್‌ನಲ್ಲಿ ಒಂದು ಬಾರಿ ಭಾಗವಹಿಸಿದ್ದಾನೆ. ಕಥೆ-ಕವಿತೆ ಬರೆಯುವ ಹವ್ಯಾಸವಿದ್ದು, ಕನ್ನಡ ಸಾಹಿತ್ಯ ಪರಿಷತ್ ಸದಸ್ಯತ್ವ ಪಡೆದಿರುವ ಸಿದ್ದೇಶ್ವರ, ಸಂಗೀತ ಕೊಡುಗೆ ಸಿಕ್ಕಿದ್ದರಿಂದ, ಕಲಿತು ಕಂಪ್ಯೂಟರ್ ಬಳಸುತ್ತಿದ್ದಾನೆ.