ತೇರಿಗೆ ಕೋಳಿ ತೂರುವ ವಿಶಿಷ್ಟ ರಥೋತ್ಸವ
ಕೊಟ್ಟೂರು: ಜೀವಂತ ಕೋಳಿಗಳನ್ನು ತೂರಾಡುವ ವಿಶಿಷ್ಟ ಹಬ್ಬ ಎಂದೇ ಹೆಸರಾಗಿರುವ ಕೊಟ್ಟೂರಿನ ಬಿಕ್ಕಿಮರಡಿ ದುರುಗಮ್ಮ ದೇವಿಯ ರಥೋತ್ಸವ, ಆಗಿ ಹುಣ್ಣಿಮೆಯ ದಿನವಾದ ಬುಧವಾರ ಗೋಧೂಳಿ ಸಮಯದಲ್ಲಿ ನಡೆಯಿತು.
ಪಟ್ಟಣದ ಹೊರವಲಯದ ಕೆರೆ ದಂಡೆಯ ಮೇಲಿರುವ ಬಿಕ್ಕಿಮರಡಿ ರಥೋತ್ಸವಕ್ಕೆ ಸಂಜೆ 6.15ಕ್ಕೆ ಚಾಲನೆ ದೊರಕುತ್ತಿದ್ದಂತೆಯೇ ನೆರೆದಿದ್ದ ಭಕ್ತರು ಜೈಕಾರ ಕೂಗಿ, ಕೋಳಿಗಳನ್ನು ತೇರಿಗೆ ತೂರಿ ನಮಸ್ಕರಿಸಿದರು. ಇದಕ್ಕೂ ಮೊದಲು ಬಿಕ್ಕಿಮರಡಿ ದುರುಗಮ್ಮ ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯ ಮೆರವಣಿಗೆಯೊಂದಿಗೆ ಪಟ್ಟಣದ ಮೇಗೇರಿ ನಾಯಕ ಜನಾಂಗದವರು ರಥವಿರುವ ಜಾಗಕ್ಕೆ ಸಂಪ್ರದಾಯಬದ್ಧವಾಗಿ ತಂದರು. ಇದಾದ ಅನಂತರ ಗುಡಿಯಲ್ಲಿ ವಿವಿಧ ಬಗೆಯ ಸೇವೆಗಳನ್ನು ದೇವಿಗೆ ಸಲ್ಲಿಸಲಾಯಿತು. ರಥೋತ್ಸವಕ್ಕೆ ಚಾಲನೆ ದೊರಕುವ ಮುನ್ನ ದುರುಗಮ್ಮ ದೇವಿ ಪಟಾಕಿ ಹರಾಜು ನಡೆಯಿತು. ಗಂಗಮ್ಮನಹಳ್ಳಿಯ ಮಾರೆಪ್ಪ ರು. 22,101ಗಳಿಗೆ ಪಟಾಕಿ ತನ್ನದಾಗಿಸಿಕೊಂಡರು. ರಥವನ್ನು ಎಳೆಯುವಾಗ ಭಕ್ತರು ತಾವು ತಂದಿದ್ದ ಕೋಳಿಗಳನ್ನು ತೂರಿ ದೇವಿಗೆ ನಮಿಸಿದರು.