ಮೈಲಾರಲಿಂಗೇಶ್ವರ ರಥೋತ್ಸವದಲ್ಲಿ ಕಲ್ಲೆಸೆತ
ಹೂವಿನಹಡಗಲಿ: ಕೋಟ್ಯಂತರ ಭಕ್ತರ ಆರಾಧ್ಯ ದೈವ, ತಾಲೂಕಿನ ಸುಕ್ಷೇತ್ರ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಸಂಭ್ರಮದ ರಥೋತ್ಸವಕ್ಕೆ ಆರಂಭದಲ್ಲೇ ವಿಘ್ನ ಎದುರಾಯಿತು.
ಸುಮಾರು 80 ವರ್ಷಗಳ ಬಳಿಕ ಈ ಸಲ ಬುಧವಾರ ರಾತ್ರಿ ಅಗಿ ಹುಣ್ಣಿಮೆ ಸಂದರ್ಭದಲ್ಲಿ ರಥೋತ್ಸವ ಆಯೋಜಿಸಲಾಗಿತ್ತು. ತೇರು ಮುಖ್ಯ ಬೀದಿಯಲ್ಲಿ ಸಾಗುತ್ತಿರುವಾಗ ಸಾವಿರಾರು ಭಕ್ತರು ಸಂಪ್ರದಾಯದಂತೆ ಬಾಳೆಹಣ್ಣು, ಉತ್ತತ್ತಿ ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. ಇದೇ ವೇಳೆ ಕಿಡಿಗೇಡಿಗಳು ತೇರಿನಲ್ಲಿ ಕುಳಿತಿದ್ದ ದೇವಸ್ಥಾನದ ಧರ್ಮಾಧಿಕಾರಿ ವೆಂಕಪ್ಪಯ್ಯ ಒಡೆಯರ್ಗೆ ಕಲ್ಲೆಸೆದಿದ್ದಾರೆ. ಬಳಿಕ ಒಡೆಯರ್, ತೇರಿನಿಂದ ಕೆಳಗಿಳಿದು ಪಕ್ಕದಲ್ಲಿದ್ದ ದುರುಗಮ್ಮ ದೇವಸ್ಥಾನದಲ್ಲಿ ಕುಳಿತರು. ಇಲ್ಲಿ ತಮ್ಮ ಮೇಲೆ ಹಲ್ಲೆ, ಮಾನಸಿಕ ಹಿಂಸೆ ನಿರಂತರವಾಗಿ ನಡೆಯುತ್ತಿದೆ. ಕಾರ್ಣಿಕದ ಸಂದರ್ಭದಲ್ಲೂ ಅಪಾಯದ ಲಕ್ಷಣಗಳು ಕಂಡು ಬಂದಿದ್ದವು. ಆಗ ಪೊಲೀಸರ ರಕ್ಷಣೆ ಕೋರಿದ್ದೆ ಎಂದು ಒಡೆಯರ್ ಹೇಳಿದರು.
ಇದೇ ವೇಳೆ, ರಥಬೀದಿಯ ಪಕ್ಕದಲ್ಲಿದ್ದ ವಿದ್ಯುತ್ ಕಂಬ ಹಾಗೂ ತಂತಿಗೆ ತೇರು ತಗುಲಿ ಅವಘಡ ಆಗುವುದನ್ನೂ ಭಕ್ತರು ತಪ್ಪಿಸಿದ್ದಾರೆ. ತೇರೆಳೆಯುವ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ತಪ್ಪಿಸುವಂತೆ ಜೆಸ್ಕಾಂಗೆ ದೇವಸ್ಥಾನದ ಅಧಿಕಾರಿಗಳು ಮನವಿ ಮಾಡಿರಲಿಲ್ಲ ಎಂದು ಭಕ್ತರು ಆರೋಪಿಸಿದ್ದಾರೆ.