ಡಿಕ್ಕಿ: ಪಶುವೈದ್ಯ ಸಾವು
ಸಿರುಗುಪ್ಪ: ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಶನಿವಾರ ರಾತ್ರಿ ಪಟ್ಟಣದ ಪೊಲೀಸ್ ಸಿಬ್ಬಂದಿ ವಸತಿಗೃಹದ ಬಳಿ ಸಂಭವಿಸಿದೆ.
ಕೆ. ಬೆಳಗಲ್ ಗ್ರಾಮದ ಸರ್ಕಾರಿ ಪಶುವೈದ್ಯಾಧಿಕಾರಿ ಕೆ.ಜೆ. ಮಾರುತಿ (26) ಮೃತ ದುರ್ದೈವಿ.
ಕರ್ತವ್ಯ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ ಬಳ್ಳಾರಿಯಿಂದ ಸಿರುಗುಪ್ಪ ಕಡೆಗೆ ಹೊರಟಿದ್ದ ಲಾರಿ ಡಿಕ್ಕಿ ಹೊಡೆದಿದೆ.
ಗಂಭೀರವಾಗಿ ಗಾಯಗೊಂಡ ಮಾರುತಿಯನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮಾರುತಿ ಮೃತಪಟ್ಟಿದ್ದಾರೆ. ಲಾರಿ ಚಾಲಕನ್ನು ಬಂಧಿಸಲಾಗಿದ್ದು, ಸಿರಗುಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಗ್ನಿ ಆಕಸ್ಮಿಕ: 7 ಬಣವೆ ಭಸ್ಮ
ಸಿರುಗುಪ್ಪ: ಹುಲ್ಲಿನ ಬಣಿವೆಯೊಂದರಲ್ಲಿ ಕಾಣಿಸಿಕೊಂಡ ಅಗ್ನಿಜ್ವಾಲೆ ತನ್ನ ಕೆನ್ನಾಲಿಗೆ ಚಾಚಿ ಎಳು ಬಣವೆಗಳನ್ನು ಸುಟ್ಟು ಭಸ್ಮ ಮಾಡಿರುವ ಘಟನೆ ತಾಲೂಕಿನ ತೆಕ್ಕಲಕೋಟೆಯಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಪಟ್ಟಣದ 18ನೇ ವಾರ್ಡಿನ ವಾಲ್ಮೀಕಿ ನಗರದ ಜಿನ್. ರುದ್ರಪ್ಪ ಬಯಲು ಜಾಗದಲ್ಲಿ ಹಾಕಿದ್ದ ಏಳು ಹುಲ್ಲಿನ ಬಣವೆಗಳು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ರು. 2.5ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸಕಾಲಕ್ಕೆ ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದೆ.