ಬೆಂಕಿ ನಂದಿಸೋದು ಈಗ ಕ್ವಿಕ್
-ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 18
ನಗರ ಪ್ರದೇಶದ ಎಂದಾಕ್ಷಣ ಕಿರಿದಾದ ರಸ್ತೆಗಳು, ಸಣ್ಣ ಸಣ್ಣ ಕೇರಿ ರೂಪದ ಬಡಾವಣೆ, ಸ್ಲಂ ಪ್ರದೇಶದಲ್ಲಿ ವಾಹನಗಳು ಹೋಗುವುದೇ ಕಷ್ಟ. ಇಂತಹ ಸಂದರ್ಭದಲ್ಲಿ ಅಗ್ನಿ ದುರಂತ, ವಿದ್ಯುತ್ ಅವಘಡ ಸಂಭವಿಸಿದಾಗ ಅಗ್ನಿ ಶಾಮಕ ದಳ ಕಾರ್ಯಾಚರಣೆ ಮಾಡುವುದು ತೀರಾ ಕಷ್ಟ. ಈ ಸಮಸ್ಯೆಗೆ ಮುಕ್ತಿ ನೀಡಲು ತುರ್ತು ಸ್ಪಂದಿಸುವ ವಾಹನ (ಕ್ವಿಕ್ ರೆಸ್ಪಾನ್ಸ್ ವೆಹಿಕಲ್) ಕಾರ್ಯಾಚರಣೆ ಆರಂಭಿಸಲಿದೆ.
ಕಿರಿದಾದ ಪ್ರದೇಶದಲ್ಲಿ ಸುಲಲಿತವಾಗಿ ಹೋಗಿ ಬೆಂಕಿ ನಂದಿಸುವ ಶಕ್ತಿ ಈ ವಾಹನಕ್ಕಿದೆ. ಇನ್ನು ಅಗ್ನಿ ದುರಂತ ಪ್ರದೇಶದಲ್ಲಿ ಇದೊಂದು ರೀತಿಯ ಪ್ರಥಮ ಚಿಕಿತ್ಸೆ ಕ್ರಮದ ಮಾದರಿ. ಬಳ್ಳಾರಿಯಂತಹ ಬಿಸಿಲು ನಾಡಿನಲ್ಲಿ ಇಂತಹ ವಾಹನ ಅತ್ಯಗತ್ಯವಾಗಿದೆ.
ಅದೆಷ್ಟೋ ಸಂದರ್ಭದಲ್ಲಿ ಕಿರಿದಾದ ರಸ್ತೆಗಳಲ್ಲಿ, ಓಣಿಗಳಲ್ಲಿ ಅಗ್ನಿ ದುರಂತಗಳು, ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿದಾಗ ಅಗ್ನಿ ಶಾಮಕ ವಾಹನ ಸಕಾಲಕ್ಕೆ ತಲುಪದೆ ಜೀವಹಾನಿ ಸಂಭವಿಸಿದ ಉದಾಹರಣೆಗಳು ಇವೆ. ಇಂತಹ ಸಮಸ್ಯೆಗಳಿಗೆ ಮುಕ್ತಿ ನೀಡಲು ಅಗ್ನಿ ಶಾಮಕ ಇಲಾಖೆ ಮುಂದಾಗಿದೆ. ಬಳ್ಳಾರಿ ಅಗ್ನಿ ಶಾಮಕ ಇಲಾಖೆಯ ಪ್ರಾದೇಶಿಕ ಕಚೇರಿಯಲ್ಲಿ ಕಳೆದ 10 ದಿನಗಳ ಹಿಂದೆ ಕ್ವಿಕ್ ರೆಸ್ಪಾನ್ಸ್ ವೆಯಿಕಲ್ ಬಂದಿದ್ದು, ತನ್ನ ಕಾರ್ಯಾಚರಣೆ ಆರಂಭಿಸಿದೆ. ಜರ್ಮನ್ ಟೆಕ್ನಾಲಜಿಯ ಈ ವಾಹನದ ಬೆಲೆ ರು. 12ರಿಂದ 15 ಲಕ್ಷ.
ಜರ್ಮನ್ ಟೆಕ್ನಾಲಜಿಯ ವಾಹನ ಟಾಟಾ 207 ಮಾದರಿಯಲ್ಲಿದೆ. ಕಿರಿದಾದ ರಸ್ತೆಯಲ್ಲಿ ಸಂಚರಿಸಲು ಅನುಕೂಲವಾಗಲಿದೆ. 500 ಲೀ. ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಈ ವಾಹನ ಸ್ಪೇ ವ್ಯವಸ್ಥೆ ಹೊಂದಿದ್ದು, ಬೆಂಕಿ ನಂದಿಸಲು ಹೆಚ್ಚು ನೀರಿನ ಅವಶ್ಯಕತೆಯೂ ಇಲ್ಲ. ನೀರಿನ ಸ್ಪ್ರೇ 22 ರಿಂದ 25 ಅಡಿಯವರೆಗೆ ದೂರ ಚಿಮ್ಮುವುದರಿಂದ ಕಿರಿದಾಡ ಓಣಿಗಳಲ್ಲಿ ಹೋಗಿ ಬೆಂಕಿ ಆಕಸ್ಮಿಕ ತಪ್ಪಿಸಲು ಅನುಕೂಲಕರವಾಗಿದೆ.
ಪ್ರಥಮ ಚಿಕಿತ್ಸೆ ಮಾದರಿ ವಾಹನ
ಬೆಂಕಿ ಅವಘಡ ಸಂಭವಿಸಿದಾಗ ಶೀಘ್ರದಲ್ಲಿಯೇ ಘಟನಾ ಸ್ಥಳಕ್ಕೆ ತಲುಪಿ ಪ್ರಥಮ ಚಿಕಿತ್ಸೆ ಮಾದರಿಯಲ್ಲಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತದೆ. ನಂತರ ಉಳಿದ ವಾಹನಗಳು ಬಂದು ಬೆಂಕಿ ನಂದಿಸಲು ಮುಂದಾಗಲಿವೆ.
ಹೆಸರಿಗೆ ತಕ್ಕಂಥ ವಾಹನ
ವಿದ್ಯುತ್ ಅವಘಡಗಳು ಸಂಭವಿಸಿದಾಗ ಕಾರ್ಯಾಚರಣೆ ಸಂದರ್ಭದಲ್ಲಿ ಅಗ್ನಿಶಾಮಕ ದಳ ನೀರು ಚುಮುಕಿಸುವ ಸಂದರ್ಭದಲ್ಲಿ ಶಾಕ್ ಹೊಡೆಯುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದರೆ ಈ ವಾಹನ ಸ್ಪ್ರೇ ವ್ಯವಸ್ಥೆ ಹೊಂದಿರುವುದರಿಂದ ಶಾಕ್ ಹೊಡೆಯುವ ಸಾಧ್ಯತೆ ಇಲ್ಲವೇ ಇಲ್ಲ. ಮೀಸ್ಟ್ ಟೆಕ್ನಾಲಜಿ ಹೊಂದಿರುವ ಈ ವಾಹನ ಜೆಟ್ ಮತ್ತು ಸ್ಪ್ರೇ ಎರಡು ವ್ಯವಸ್ಥೆಯನ್ನು ಮಾಡಲಾಗಿದೆ. ಇದರಿಂದಾಗಿ ನೀರಿನ ಫೋರ್ಸ್ ಕೂಡ ಹೆಚ್ಚಾಗಿರುತ್ತದೆ. ಇಂತಹ ವಾಹನವು ನಗರದಲ್ಲಿ ಪ್ರದೇಶದಲ್ಲಿ ಅತ್ಯಂತ ಹೆಚ್ಚಿನ ಉಪಯೋಗವಾಗಲಿದೆ.
ನಗರದಲ್ಲಿ ಅತ್ಯಗತ್ಯ
ಪ್ರಾದೇಶಿಕ ಅಗ್ನಿ ಶಾಮಕ ಅಧಿಕಾರಿ ಎಂ.ಆರ್. ನರಸಿಂಹಮೂರ್ತಿ ಹಾಗೂ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಬಸವಪ್ರಭು ಶರ್ಮ ಮಾತನಾಡಿ, ನಗರದ ಪ್ರದೇಶಗಳಲ್ಲಿ ಕ್ವಿಕ್ ರೆಸ್ಪಾನ್ಸ್ ವೆಹಿಕಲ್ ಅತ್ಯಂತ ಅವಶ್ಯಕವಾಗಿದೆ. ಕಿರಿದಾದ ರಸ್ತೆ, ಓಣಿಗಳಲ್ಲಿ ಅಗ್ನಿ ಅವಘಡಗಳು ಸಂಭವಿಸಿದಾಗ, ಈ ವಾಹನವು ಶೀಘ್ರದಲ್ಲಿಯೇ ಹೋಗಿ, ಸುಲಭವಾಗಿಯೇ ಬೆಂಕಿ ನಂದಿಸುವಲ್ಲಿ ಸಹಕಾರಿಯಾಗಿದೆ ಎಂದು ತಿಳಿಸಿದರು.