ಲೋಕಿಕೆರೆ ಬಳಿ ವ್ಯಕ್ತಿ ಕೊಲೆ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಮೇ 18
ತಾಲೂಕಿನ ಲೋಕಿಕೆರೆ ಗ್ರಾಮದ ಬಳಿ ವ್ಯಕ್ತಿಯೋರ್ವನ ಕೊಲೆ ನಡೆದಿದ್ದು, ಜೊತೆಯಲ್ಲಿದ್ದ 5 ವರ್ಷದ ಮೊಮ್ಮಗಳು ರಾತ್ರಿ ಪೂರ ಸಾವನ್ನಪ್ಪಿದ ತನ್ನ ಅಜ್ಜನ ಪಕ್ಕದಲ್ಲಿಯೇ ಇದ್ದ ಹೃದಯ ವಿದ್ರಾವಕ ಘಟನೆ ಶನಿವಾರ ರಾತ್ರಿ ನಡೆದಿದೆ.
ತಾಲೂಕಿನ ಲೋಕಿಕೆರೆ ಪೂಜಾರ್ ಹನುಮಂತಪ್ಪ (50) ಕೊಲೆಯಾದ ದುರ್ದೈವಿ. ತನ್ನ ಮಗಳ ಊರು ಸಕಲಾಪುರಹಟ್ಟಿಯಿಂದ ಐದು ವರ್ಷದ ಮೊಮ್ಮಗಳು ಶ್ವೇತಾ ಜತೆ ಒಳದಾರಿ (ಚಿಕ್ಕದಾದ ದಾರಿ) ಯಲ್ಲಿ ಲೋಕಿಕೆರೆಗೆ ಬರುವ ಮಾರ್ಗ ಮಧ್ಯೆ ಈ ದುರ್ಘಟನೆ ನಡೆದಿದೆ.
ಮೃತನ ಕಾಲು, ತಲೆಗೆ ಮಚ್ಚು, ಕೊಡಲಿಯಿಂದ ಕಡಿದ ಗಾಯಳಾಗಿದ್ದು, ಆತನ ಜತೆಗಿದ್ದ 5 ವರ್ಷದ ಮೊಮ್ಮಗಳು ಸುರಕ್ಷಿತವಾಗಿರುವುದು ಅಚ್ಚರಿ ಮೂಡಿಸಿದೆ. ಲೋಕಿಕೆರೆ ಹಾಗೂ ಸಕಲಾಪುರದಹಟ್ಟಿ ಮಾರ್ಗ ಮಧ್ಯದ ನಿರ್ಜನ ಪ್ರದೇಶದಲ್ಲಿ ದಿಕ್ಕು ತೋಚದಾದ ಮೊಮ್ಮಗಳು ಅಜ್ಜನನ್ನು ಕೊಲೆ ಮಾಡಿದ್ದರೂ ಧೃತಿಗೆಡದೆ ರಾತ್ರಿ ಪೂರ ಅದೇ ಜಾಗದಲ್ಲಿ ಅಳುತ್ತಾ ಕುಳಿತಿದ್ದಾಳೆ. ಬೆಳಗ್ಗೆ ತನ್ನ ಸ್ವಗ್ರಾಮ ಸಕಲಾಪುರಕ್ಕೆ ಬಂದು ಅಜ್ಜ ಕೊಲೆಯಾಗಿರುವ ವಿಷಯ ಮುಟ್ಟಿಸಿದ್ದಾಳೆ. ಸಾವನ್ನಪ್ಪಿರುವ ಅಜ್ಜನ ಮುಂದೆ ರಾತ್ರಿ ಪೂರ ರೋದಿಸುತ್ತಾ ಕುಳಿತಿರುವುದನ್ನು ಕಂಡು ಸುತ್ತಮುತ್ತಲ ಹಳ್ಳಿಗಳ ಜನತೆ ಆ ಮಗುವಿನ ಧೈರ್ಯವನ್ನು ಕೊಂಡಾಡಿದರು.
ತನ್ನ ಪತಿಯನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆಂದು ಪತ್ನಿ ಹಂಪಮ್ಮ ನೀಡಿದ ದೂರಿನಂತೆ ತಾಲೂಕಿನ ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.