ಥಿಯೋಸಾಫಿಕಲ್ ಕಾಲೇಜಿನಲ್ಲಿ 9, 10ನೇ ತರಗತಿ ಆರಂಭ
ಹೊಸಪೇಟೆ: ಥಿಯೋಸಾಫಿಕಲ್ ಮಹಿಳಾ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ 9 ಮತ್ತು 10ನೇ ತರಗತಿ ಆರಂಭಿಸಲಾಗುವುದು ಎಂದು ಥಿಯೋಸಾಫಿಕಲ್ ಮಹಿಳಾ ಕಾಲೇಜಿನ ಅಧ್ಯಕ್ಷ ಬಾಬುಲಾಲ್ ಜೈನ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಥಿಯೋಸಾಫಿಕಲ್ ಮಹಿಳಾ ಕಾಲೇಜಿನಲ್ಲಿ ಈಗಾಗಲೇ ಪದವಿ ಕಾಲೇಜು, ಪಿಯುಸಿ ಮತ್ತು ಬಿಬಿಎಂ ಪದವಿ ಕಾಲೇಜ್ ಆರಂಭಿಸಲಾಗಿದೆ. ಆದರೆ ಈ ವರ್ಷದಿಂದ ಬಾಲಕಿಯರಿಗಾಗಿ 9 ಮತ್ತು 10ನೇ ತರಗತಿಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಆರಂಭಿಸಲಾಗುತ್ತದೆ.
ಥಿಯೋಸಾಫಿಕಲ್ ಮಹಿಳಾ ಕಾಲೇಜಿನ ಆವರಣದಲ್ಲಿ ಪ್ರೌಢಶಾಲೆಯಿಂದ ಈಗ ಪದವಿ ತರಗತಿಯವರಿಗೆ ಒಂದೇ ಆವರಣದಲ್ಲಿ ಬಾಲಕಿಯರು ವಿದ್ಯಾಭ್ಯಾಸ ಮಾಡಲು ಅನುಕೂಲವಾಗಿದೆ ಎಂದು ತಿಳಿಸಿದರು.
ಥಿಯೋಸಾಫಿಕಲ್ ಮಹಿಳಾ ಕಾಲೇಜಿನಲ್ಲಿ ಕೇವಲ ಬಾಲಕಿಯರಿಗಾಗಿ ವ್ಯವಸ್ಥೆ ಮಾಡಿರುವುದರಿಂದ ಈ ವರ್ಷದಿಂದ ಥಿಯೋಸಾಫಿಕಲ್ ಬಿಬಿಎಂಗೆ ಬಾಲಕರನ್ನು ಸೇರಿಸಿಕೊಳ್ಳುತ್ತಿಲ್ಲ. ಮಹಿಳಾ ಕಾಲೇಜಿನಲ್ಲಿರುವ ಬಿಬಿಎಂಗೆ ಪ್ರಸಕ್ತ ವರ್ಷ ಮಹಿಳೆಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದರು.
ಮುಂದಿನ ದಿನದಲ್ಲಿ ಥಿಯೋಸಾಫಿಕಲ್ ಮಹಿಳಾ ಕಾಲೇಜಿನ ಆವರಣದಲ್ಲಿ ಪ್ರಾಥಮಿಕ ಹಂತದಿಂದ ಶಿಕ್ಷಣ ಆರಂಭಿಸಲಾಗುವುದು. ಪ್ರಾಥಮಿಕ ಶಿಕ್ಷಣದಿಂದ ಪದವಿ ತರಗತಿಯವರೆಗೂ ಒಂದೇ ಆವರಣದಲ್ಲಿ ವಿದ್ಯಾಭ್ಯಾಸ ಮಾಡಲು ಬಾಲಕಿಯರಿಗೆ ಅನುಕೂಲ ಕಲ್ಪಿಸಿಕೊಡಲಾಗುತ್ತದೆ ಎಂದು ತಿಳಿಸಿದರು.
ಥಿಯೋಸಾಫಿಕಲ್ ಮಹಿಳಾ ಕಾಲೇಜಿನ ಕಾರ್ಯದರ್ಶಿ ಅಶೋಕ್ ಜೀರೆ ಮಾತನಾಡಿ, ಥಿಯೋಸಾಫಿಕಲ್ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ಪದವಿ, ಪಿಯುಸಿ ಕಾಲೇಜ್ ಸೇರಿದಂತೆ ಬಿಬಿಎಂನಲ್ಲಿ ಒಳ್ಳೆಯ ಫಲಿತಾಂಶ ಬರುತ್ತಿದೆ. ಇದು ಹರ್ಷದಾಯಕ ಸಂಗತಿ ಎಂದರು.
ಸ್ಥಳೀಯ ಮುಖಂಡ ಕೆ. ಸದಾಶಿವ ರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು.