ಜೈನರ ಅಹಿಂಸಾ ಮಾರ್ಗ ವಿಶ್ವಕ್ಕೆ ಮಾದರಿ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮೇ 20
ಜೈನ್ ಧರ್ಮೀಯರ ಅಹಿಂಸಾ ಮಾರ್ಗ ಪಾಲನೆ ವಿಶ್ವಕ್ಕೆ ಶಾಂತಿ ಮಂತ್ರ ಸಾರಿದ್ದು, ಯಾವ ಕಾಲದಲ್ಲಿಯೂ ಯಾರಿಗೂ ನೋವುಂಟು ಮಾಡಿಲ್ಲ ಎಂದು ಯುವಜನ ಕ್ರೀಡಾ ಇಲಾಖೆ ಮತ್ತು ಮೀನುಗಾರ ಇಲಾಖೆ ಸಚಿವ ಅಭಯಚಂದ್ರ ಜೈನ್ ಹೇಳಿದರು.
ಇಲ್ಲಿನ ಜೈನ್ ಸಮುದಾಯದವರು ಮೂರು ದಿನಗಳ ಕಾಲ ಆಯೋಜಿಸಿದ್ದ ಪಂಚಕಲ್ಯಾಣ ಪ್ರತಿಷ್ಠಾಪನಾ ಮಹಾ ಮಹೋತ್ಸವ ಮಂಗಳ ಕಾರ್ಯಕ್ರಮದ ಮೂರನೇ ದಿನದ ಕಾರ್ಯಕ್ರಮ ಮಂಗಳವಾರ ಉದ್ಘಾಟಿಸಿ ಮಾತನಾಡಿ, ಆದಿ ಕಾಲದಿಂದಲ್ಲೂ ಅಹಿಂಸಾ ಮಾರ್ಗ ಪಾಲನೆ ನಡೆದು ಬಂದಿದೆ. ದೇಶದ ಇತಿಹಾಸದಲ್ಲಿ ಜೈನ್ ಚಕ್ರವರ್ತಿಗಳು ಆಳ್ವಿಕೆ ಮಾಡಿದ್ದರೂ ಹಿಂಸೆ ಮಾರ್ಗ ಹಿಡಿದಿಲ್ಲ. ರನ್ನ, ಪಂಪ ರತ್ಮಕರ ವರ್ಣಿಯಂತಹ ಮಹಾನ್ ಕವಿಗಳನ್ನು ಜೈನ್ ಸಮಾಜ ನಾಡಿಗೆ ನೀಡಿದ ಹೆಗ್ಗಳಿಕೆ ಹೊಂದಿದೆ ಎಂದರು.
ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿ ವಿಶ್ವಕ್ಕೆ ಶಾಂತಿ ಮಂತ್ರ ಸಾರುತ್ತಿದೆ. ಬದುಕಿನಲ್ಲಿ ಯಾರಿಗೂ ತೊಂದರೆ ನೀಡದಂತೆ ಈ ಮಲ್ಲಿಗೆ ನಾಡಿನಿಂದ ಆಯ್ಕೆಯಾಗಿದ್ದ ಮಾಡಿ ಡಿಸಿಎಂ ಎಂ.ಪಿ. ಪ್ರಕಾಶ ಅವರ ಆದರ್ಶಗಳನ್ನು ಇಂದಿನ ರಾಜಕಾರಣಿಗಳು ಅಳವಡಿಕೊಳ್ಳಬೇಕಿದೆ. ಆಗ ಸುಂದರ ಕರ್ನಾಟಕ ಕಾಣಲು ಸಾಧ್ಯ ಎಂದರು.
ರಾಜ್ಯದ ಅನೇಕ ಕಡೆಗಳಲ್ಲಿ ಪಂಚ ಕಲ್ಯಾಣ ಮಹೋತ್ಸವಗಳನ್ನು ನಡೆಸುತ್ತಾ ಧರ್ಮ ಜಾಗೃತಿ ಮೂಡಿಸುವ ಹೊಂಬುಜ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಶ್ರೀಗಳು ಜತೆಗೆ ತಾವು ಕೈ ಜೋಡಿಸುವ ಮೂಲಕ ಧರ್ಮ ಉಳಿಸುವ ಕೆಲಸ ಮಾಡಬೇಕಿದೆ ಎಂದರು. ಶ್ರೀ ಕ್ಷೇತ್ರ ಹೊಂಬುಜ ದೇವೇಂದ್ರ ಭಟ್ಟಾರಕ ಪಟ್ಟಾಚಾರ್ಯವರ್ಯ ಮಾತನಾಡಿ, ದುಃಖ ದೂರ ಮಾಡಲು ಧರ್ಮ ಪಾಲನೆ ಮಾಡಬೇಕು. ಧರ್ಮದಲ್ಲಿ ನಂಬಿಕೆ, ತತ್ವದ ಆಧಾರದ ಮೇಲೆ ಪ್ರೀತಿ ದರ್ಶನವಾಗುತ್ತದೆ ಎಂದರು.
ಶಾಸಕ ಎಂ.ಪಿ. ರವೀಂದ್ರ, ಸಮಾಜ ಅಧ್ಯಕ್ಷ ಪಾಶ್ವನಾಥ ಜೈನ್, ಗೌರವಾಧ್ಯಕ್ಷ ಡಾ. ಧರ್ಮಣ್ಣ, ಪುರಸಭೆ ಸದಸ್ಯ ಮಂಜುನಾಥ ಜೈನ್, ಸಂತೋಷ ಜೈನ್, ಎಂ. ದೇವೇಂದ್ರಗೌಡ, ಎಚ್. ಅಮಿತ್, ಜೀನದತ್ತರಾಯ, ಅಜಿತ್, ಎಂ. ತವನಪ್ಪ, ಪ್ರೇಮಾ ಸೇರಿದಂತೆ ಇತರರಿದ್ದರು.