ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಅಭಿನೇತ್ರಿ ಎಲ್ಲ ನಟಿಯರ ಜೀವನ ವೃತ್ತಾಂತ

Vishwanath S
Updated On : 23 May 2014, 11:15 am

ಹೊಸಪೇಟೆ:  ಚಿತ್ರರಂಗದಲ್ಲಿ ಅಭಿನೇತ್ರಿಯಾಗಿ ಹೆಸರು ಮಾಡಿರುವ ನಟಿಯರ ವೈಯಕ್ತಿಕ ಜೀವನ ಸಾದರಪಡಿಸುವ ಅಭಿನೇತ್ರಿ ಕನ್ನಡ ಸಿನಿಮಾ ಜೂನ್‌ನಲ್ಲಿ ತೆರೆಕಾಣಲಿದೆ ಎಂದು ಚಿತ್ರನಟಿ ಪೂಜಾ ಗಾಂಧಿ ಹೇಳಿದರು.
ಗುರುವಾರ ನಗರದಲ್ಲಿ ಜಾವೇದ್ ಹಬೀಬ್ ಹೇರ್ ಆ್ಯ ಂಡ್ ಬ್ಯಾಲಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಅಭಿನೇತ್ರಿ ಚಿತ್ರದ ಧ್ವನಿಸುರುಳಿ ಬಿಡುಗಡೆಗೊಳಿಸಿ ಮಾತನಾಡಿದರು. ಅಭಿನೇತ್ರಿ ಸಿನಿಮಾ ನಟಿಯೊಬ್ಬಳ ಜೀವನ ವೃತ್ತಾಂತವಲ್ಲ. ಎಲ್ಲ ನಟಿಯರ ಜೀವನ ವೃತ್ತಾಂತವೂ ಹೌದು. ಸಿನಿಮಾ ನೋಡಿದಾಗ ಮಿನುಗು ತಾರೆ ಕಲ್ಪನಾ, ಮೀನಾ ಕುಮಾರಿ, ಮಧುಬಾಲ ಎಲ್ಲರೂ ನೆನಪಾಗುತ್ತಾರೆ. ನಾನೇ ನಿರ್ಮಾಪಕಿಯಾಗಿ ನಿರ್ಮಿಸಿರುವ ಈ ಚಿತ್ರ ನನ್ನ ಭರವಸೆಯ ಚಿತ್ರವಾಗಿದೆ. ಕನ್ನಡಿಗರು ಪ್ರೋತ್ಸಾಹಿಸಿದರೆ ಇನ್ನೂ ಹಲವಾರು ಚಿತ್ರಗಳನ್ನು ನಿರ್ಮಿಸುವ ಬಯಕೆ ನನ್ನದಾಗಿದೆ ಎಂದು ತಿಳಿಸಿದರು.
ಮತ್ತೆ ಸ್ಪರ್ಧಿಸುವ ಬಯಕೆ
ರಾಯಚೂರು ಜಿಲ್ಲೆಯ ಜನರನ್ನು ಮರೆಯಲು ಸಾಧ್ಯವಿಲ್ಲ. ವಿಧಾನಸಭೆ ಚುನಾವಣೆ ಮುಗಿದ ನಂತರ ವೃತ್ತಿಗೆ ಮರಳಿದೆ. ಮತ್ತೇ ಅವಕಾಶ ಸಿಕ್ಕರೆ ಸ್ಪರ್ಧಿಸುವೆ. ಶ್ರೀರಾಮುಲು ಎಲ್ಲಿ ಇರುತ್ತಾರೋ, ಹೇಗೆ ನಿರ್ಧರಿಸುತ್ತಾರೋ, ಅದರಂತೆ ಮುಂದಿನ ರಾಜಕೀಯ ಹೆಜ್ಜೆಗಳಿರುತ್ತವೆ. ಬಿಎಸ್‌ಆರ್ ಪಕ್ಷದಲ್ಲಿ ಈಗಲೂ ಇರುವೆ. ಮುಂದಿನ ರಾಜಕೀಯವನ್ನು ಶ್ರೀರಾಮುಲು ಹೇಗೆ ತೆಗೆದುಕೊಳ್ಳುತ್ತಾರೆ. ಹಾಗೇ ನಡೆದುಕೊಳ್ಳುವುದಾಗಿ ಅವರು ತಿಳಿಸಿದರು.  ಅಭಿನೇತ್ರಿ ಸಿನಿಮಾ ನಿರ್ದೇಶಕ ಸತೀಶ್, ಜಾವೇದ್ ಹಬೀಬ್ ಹೇರ್ ಅಂಡ್ ಬ್ಯಾಲಿ ಮಾಲೀಕರಾದ ನಜುಮೀನ್ ಖವಾಸ್ ಹಾಗೂ ಮಹ್ಮದ್ ನಿಯಾಜಿ, ಜಾವೇದ್ ಸೇರಿದಂತೆ ಇತರರು ಇದ್ದರು.
ಅಭಿವೃದ್ಧಿಗೆ ಪಪಂ ಅಧ್ಯಕ್ಷೆ ವಿರೋಧ
ಕೊಟ್ಟೂರು: ಅಭಿವೃದ್ಧಿ ಕಾಮಗಾರಿಗೆ ಕ್ರಿಯಾ ಯೋಜನೆ ರೂಪಿಸಿ ಆಡಳಿತಾತ್ಮಕ ಅನುಮೋದನೆ ದೊರೆತಿದ್ದರೂ ಪಪಂ ಅಧ್ಯಕ್ಷೆ ಮತ್ತು ಕೆಲ ಸದಸ್ಯರು ಇಲ್ಲಿನ 7ನೇ ವಾರ್ಡ್‌ನಲ್ಲಿ ಅಭಿವೃದ್ದಿ ಕಾಮಗಾರಿಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂದು ಪಪಂ ಬಿಜೆಪಿ ಸದಸ್ಯ ಶಿರಿಬಿ ಕೊಟ್ರೇಶ್ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದ ವಿದ್ಯಾನಗರದಲ್ಲಿ 2012-13ನೇ ಸಾಲಿನ ಹಣಕಾಸು ಯೋಜನೆಯಡಿಯಲ್ಲಿ ಆರ್‌ಸಿಸಿ ಚರಂಡಿ ಕಾಮಗಾರಿಯನ್ನು ರು. 3.475 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲು ಪಪಂ ಆಡಳಿತ ನಿರ್ಧರಿಸಿ ಟೆಂಡರ್ ಸಹ ಕರೆದಿತ್ತು. ಗುತ್ತಿಗೆದಾರ ಜೆ. ಕೀರ್ತಿಶೇಖರ್ ಅವರಿಗೆ ಕಾಮಗಾರಿ ವಹಿಸಲು ನಿರ್ಧಾರ ಕೈಗೊಳ್ಳಲಾಗಿತ್ತು. ಕಾಮಗಾರಿ ಸಹ ಪ್ರಾರಂಭವಾಗಿತ್ತು. ಆದರೆ ಕಾಮಗಾರಿಯನ್ನು ಅರ್ಧಕ್ಕೆ ಕೈ ಬಿಟ್ಟಿರುವುದರಿಂದ ಅಲ್ಲಿನ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ. ಕಾಮಗಾರಿಯನ್ನು ವಿನಾಕಾರಣ ಕೈ ಬಿಟ್ಟಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಮುಖ್ಯಾಧಿಕಾರಿಗೆ ದೂರ ನೀಡಲಾಗಿತ್ತು.
ಮನವಿಗೆ ಸ್ಪಂದಿಸಿದ ಮುಖ್ಯಾಧಿಕಾರಿ ಕಾಮಗಾರಿ ನಿರ್ವಹಣೆ ಹೊತ್ತ ಗುತ್ತಿಗೆದಾರರಿಗೆ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ನೋಟಿಸ್ ಸಹ ಜಾರಿಗೊಳಿಸಲಾಗಿತ್ತು. ನೋಟಿಸ್‌ಗೆ ಉತ್ತರಿಸಿದ ಗುತ್ತಿಗೆದಾರ ಕೀರ್ತಿಶೇಖರ್ ಕಾಮಗಾರಿ ಕೈಗೊಳ್ಳದೇ ಯಥಾ ಸ್ಥಿತಿಯಲ್ಲಿಯೇ ಸ್ಥಗಿತಗೊಳಿಸುವಂತೆ ದೂರವಾಣಿ ಮೂಲಕ ಪಪಂ ಅಧ್ಯಕ್ಷರು ಮತ್ತು ಸದಸ್ಯರು ತಿಳಿಸಿದ್ದರ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ 7ನೇ ವಾರ್ಡಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯದಂತೆ ವ್ಯವಸ್ಥಿತ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು. ಪಪಂ ಅಧ್ಯಕ್ಷರು ಮತ್ತು ಕೆಲ ಸದಸ್ಯರು ತಾನೊಬ್ಬ ವಿರೋಧ ಪಕ್ಷದ ಸದಸ್ಯನಾಗಿರುವ ಕಾರಣಕ್ಕಾಗಿ ಈ ವಾರ್ಡ್‌ನಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಬಾರದೆಂಬ ಕಾರಣಕ್ಕಾಗಿ ಈ ರೀತಿ ಕಾಮಗಾರಿ ತಡೆಹಿಡಿದಿದ್ದಾರೆ. ಅವರ ವರ್ತನೆ ಹೀಗೆ ನಡೆದರೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಲು ಸಲಹೆ
ಬಳ್ಳಾರಿ: ಮಕ್ಕಳು ಓದಿನೊಂದಿಗೆ ಹಾಡು, ನೃತ್ಯ ಯೋಗ ಚಿತ್ರಕಲೆಯಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮಲ್ಲಿರುವ ಸೃಜನಶೀಲತೆ ಅಭಿವೃದ್ಧಿಪಡಿಸಿಕೊಳ್ಳಬೇಕೆಂದು ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮಹಮ್ಮದ್ ಸಲಾವುದ್ದೀನ್ ತಿಳಿಸಿದರು.
ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಾಲಭವನದ ವತಿಯಿಂದ ಮೇ 12ರಿಂದ ಹಮ್ಮಿಕೊಂಡಿದ್ದ 10 ದಿನಗಳ ಶಿಬಿರದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಇಲಾಖೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಸ್. ಕಲಾದಗಿ ಮಾತನಾಡಿ, ಇಲಾಖೆಯು ಬಾಲಭವನದ ಕ್ರಿಯಾ ಯೋಜನೆಯಂತೆ ಪ್ರತಿ ವರ್ಷವು 5 ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಶಿಬಿರದಲ್ಲಿ ಚಿತ್ರಕಲೆ, ಕರಕುಶಲ, ರಂಗ ತರಬೇತಿ, ಯೋಗ, ಸಾಮೂಹ ನೃತ್ಯ, ಜಾನಪದ ಗಾಯನ ಸೇರಿದಂತೆ ಅನೇಕ ವಿಷಯಗಳ ಕುರಿತು ತರಬೇತಿ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ತರಬೇತಿ ನೀಡಿದ ಸಂಪನ್ಮೂಲ ವ್ಯಕ್ತಿ ಮಂಜುನಾಥ ಗೋವಿಂದವಾಡ, ಜಗನ್ನಾಥ್, ಎಸ್.ಕೆ. ಆರ್. ಜಿಲಾನಿ ಬಾಷ, ಅಣ್ಣಾಜಿ ಕೃಷ್ಣಾ ರೆಡ್ಡಿ ಅವರನ್ನು ಅಭಿನಂದಿಸಲಾಯಿತು.
 ಚಿತ್ರಕಲೆ, ಕರಕುಶಲ, ಯೋಗ, ನೃತ್ಯ, ನಾಟಕ, ಹಾಡುಗಾರಿಕೆ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಸಮಾರೋಪದ ಅಂಗವಾಗಿ ಸಾಕ್ಷರತೆ ಕುರಿತು ಮಹಿಮಾ ಎಂಬ ನಾಟಕ ಪ್ರದರ್ಶನ, ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಕೆ.ಎನ್. ಚಂದ್ರಾನಾಯ್ಕ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಮ್ಮದ್ ಸರ್ವರ್ ಸೇರಿದಂತೆ ಮತ್ತಿತರರು  ಭಾಗವಹಿಸಿದ್ದರು. ಬಾಲಮಂದಿರದ ಅಧೀಕ್ಷಕ ಕೆ. ಕೊಟ್ರಪ್ಪ  ನಿರೂಪಿಸಿ ವಂದಿಸಿದರು.
ವಿದ್ಯಾಭಾರತಿ ಫೌಂಡೇಶನ್ ಸಂಸ್ಥೆ ವತಿಯಿಂದ ಶಿರಡಿಗೆ ವಿಶೇಷ ರೈಲು
ಬಳ್ಳಾರಿ: ಬೆಂಗಳೂರಿನ ವಿದ್ಯಾಭಾರತಿ ಫೌಂಡೇಷನ್ ಸಂಸ್ಥೆ ಆಶ್ರಯದಲ್ಲಿ ಶ್ರೀ ಶಿರಡಿ ಸಾಯಿ ಬಾಬಾ ಭಕ್ತರಿಗೆ ನಗರದಿಂದ ಮೊದಲ ಬಾರಿಗೆ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ. ಬೆಂಗಳೂರಿನಿಂದ ಬಳ್ಳಾರಿ ಮಾರ್ಗವಾಗಿ ಶಿರಡಿಗೆ ತೆರಳಲಿದೆ.
ರೇಲ್ವೆ ಇಲಾಖೆಯಿಂದ ಅನುಮತಿ ಪಡೆದು ವಿಶೇಷ ರೈಲು ಯಾತ್ರೆಯನ್ನು ಮೇ 30 ರಿಂದ ಜೂ.1ರ ವರೆಗೆ ಸಂಸ್ಥೆ ಆಯೋಜಿಸಿದೆ. ಕಡಿಮೆ ಖರ್ಚಿನಲ್ಲಿ ಶ್ರೀ ಶಿರಡಿ ಸಾಯಿಬಾಬಾ ದರ್ಶನ ಪಡೆಯಲು ಭಕ್ತರಿಗೆ ಸಂಸ್ಥೆಯ ಸದಸ್ಯರು ಕಲ್ಪಿಸುತ್ತಿರುವ ಸೇವಾಭಾವನೆ ಕಾರ್ಯ ಎಂದು ವಿದ್ಯಾಭಾರತಿ ಫೌಂಡೇಷನ್ ಕಾರ್ಯದರ್ಶಿ  ಅರುಣ್ ಕುಮಾರ್ ತಿಳಿಸಿದ್ದಾರೆ. ಬೆಂಗಳೂರು ನಗರದಿಂಧ ಮೇ 30ಕ್ಕೆ ಹೊರಡುವ ರೈಲು, 31ಕ್ಕೆ ಶಿರಡಿ ಕ್ಷೇತ್ರ ತಲುಪಲಿದೆ. ಶಿರಡಿಯಿಂದ ವಾಪಸ್ ಜೂ.1ಕ್ಕೆ ಬೆಂಗಳೂರಿಗೆ ಆಗಮಿಸಲಿದೆ. ಪ್ರಯಾಣದಲ್ಲಿ ಹಾಗೂ ಶಿರಡಿ ಕ್ಷೇತ್ರದಲ್ಲಿ ಭಕ್ತರಿಗೆ ಸಸ್ಯಾಹಾರಿ ಊಟ, ತಿಂಡಿ, ಕಾಫಿ, ಶುದ್ಧ ಕುಡಿವ ನೀರಿನ ಸೌಲಭ್ಯ, ಶಿರಡಿ ಕ್ಷೇತ್ರದಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗುವುದು ಹಾಗೂ ಶಿರಡಿ ಕ್ಷೇತ್ರದಿಂದ, ಶನಿ ಸಿಂಗಾಪುರ ಸ್ಥಳೀಯ ಪ್ರವಾಸವನ್ನೂ ಕಲ್ಪಿಸಲಾಗಿದೆ ಎಂದು ಫೌಂಡೇಷನ್ ಅಧ್ಯಕ್ಷ ಎಂ. ಕೃಷ್ಣ ಅವರು ತಿಳಿಸಿದ್ದಾರೆ.  
ಈ ವಿಶೇಷ ರೈಲಿನ ಟಿಕೆಟ್ ಬೇರೆ ಯಾವುದೇ ಕೌಂಟರ್ ಹಾಗೂ ರೇಲ್ವೆ ನಿಲ್ದಾಣಗಳಲ್ಲಿ ದೊರೆಯುವುದಿಲ್ಲ. ಆಸಕ್ತ ಯಾತ್ರಿಕರು ವಿದ್ಯಾಭಾರತಿ ಫೌಂಡೇಷನ್, ನಂ.25, 7ನೇ ಕ್ರಾಸ್, 5ನೇ ಮೇನ್, ಎನ್.ಆರ್. ಕಾಲೋನಿ, ಕೆನರಾ ಬ್ಯಾಂಕ್ ಎ.ಟಿ.ಎಂ. ಎದುರು, ಬೆಂಗಳೂರು - 19. ಇವರನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ 97399 43381, 95384 89920ಗೆ ಸಂಪರ್ಕಿಸಿ.
ಮಕ್ಕಳ ದಾಖಲಾತಿ ಆಂದೋಲನಕ್ಕೆ ಚಾಲನೆ
ಹೂವಿನಹಡಗಲಿ: ಪಟ್ಟಣದ ಎಲ್ಲ ಶಾಲೆಗಳ ಪ್ರಗತಿಗೆ ಪೂರಕವಾಗಲು ಮೊದಲ ಆದ್ಯತೆ ನೀಡುವುದಾಗಿ ಪುರಸಭೆ ಅಧ್ಯಕ್ಷ ಕೆ. ಸಣ್ಣ ಕೊಟ್ರೇಶ್ ತಿಳಿಸಿದರು.
ಪಟ್ಟಣದ ಬಂಗಾರಪ್ಪ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳ ದಾಖಲಾತಿ ಆಂದೋಲನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಇಲಾಖೆ ವರದಿ ಆಧರಿಸಿ, ಪಟ್ಟಣದಲ್ಲಿನ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ನಿರಂತರ ಕಲಿಕೆಗೆ ಒಳಪಡಿಸುವುದರ ಜತೆಗೆ ಹೊಸದಾಗಿ ಶಾಲೆಗೆ ಮಕ್ಕಳನ್ನು ದಾಖಲಿಸುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೊಟ್ರೇಶ್ ಮಾತನಾಡಿ,  ಮೇ 16 ರಿಂದ ರಾಜ್ಯದ ಎಲ್ಲ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಅರಂಭಿಸಿದ್ದು, ಕಡ್ಡಾಯ ಶಿಕ್ಷಣದ ಹಕ್ಕು ಜಾರಿಯಲ್ಲಿರುವುದರಿಂದ ಪಾಲಕರು ಸ್ವ ಇಚ್ಛೆಯಿಂದ ಶಾಲೆಗೆ ದಾಖಲಾತಿ ಮಾಡುತ್ತಿದ್ದಾರೆ. ಶೈಕ್ಷಣಿಕ ವರ್ಷಾರಂಭದಲ್ಲಿ ಶಾಲೆಗೆ ದಾಖಲಾದ ಮಕ್ಕಳಿಗೆ ಎಲ್ಲ ಸೌಲಭ್ಯ ನೀಡಬೇಕು ಎಂದರು.
ಜಿಲ್ಲಾ ವಿಷಯ ಪರಿವೀಕ್ಷಕ ಕೃಷ್ಣನಾಯ್ಕ ಮಾತನಾಡಿ, 5 ವರ್ಷ 10 ತಿಂಗಳ ಅವಧಿಯ ಮಗುವನ್ನು ಶಾಲೆಗೆ ದಾಖಲಿಸಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೋಷಕರು ಆಸಕ್ತಿ ವಹಿಸಬೇಕೆಂದರು. ಬಿಆರ್‌ಪಿ ಪಾಂಡ್ಯಾನಾಯ್ಕ, ವೀರೇಶ್, ಎಸ್‌ಡಿಎಂಸಿ ಅಧ್ಯಕ್ಷ ಮಂಜಪ್ಪ, ಪುರಸಭಾ ಸದಸ್ಯೆ ಕರೆಎತ್ತಿನ ಶಶಿಕಲಾ, ಮುಖಂಡರಾದ ಜಿ. ನಾಗರಾಜ್, ಶಿಕ್ಷಕ ಶಿವಮೂರ್ತಿ, ದೇವರಾಜ್ ಇದ್ದರು.
ಅರ್ಜಿ ಆಹ್ವಾನ
ಹೂವಿನಹಡಗಲಿ: ಮೀನುಗಾರಿಕೆ ಇಲಾಖೆ ಹೂವಿನಹಡಗಲಿ, ಕೂಡ್ಲಿಗಿ ಹಾಗೂ ಹಗರಿಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಬರುವ ಇಲಾಖಾ ಕೆರೆಗಳ ಮೀನುಪಾಶುವಾರು ಹಕ್ಕನ್ನು ನೇರ ಗುತ್ತಿಗೆ ಪಡೆಯಲು ಮೂರು ತಾಲೂಕುಗಳ ಮೀನುಗಾರಿಕೆ ಸಹಕಾರಿ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮೀನುಗಾರಿಕೆ ಸಹಕಾರ ಸಂಘಗಳು ಮೀನುಗಾರಿಕೆ ಇಲಾಖೆ ಕಚೇರಿಯಿಂದ ಅರ್ಜಿ ಪಡೆದು, ಗುತ್ತಿಗೆ ಮೊತ್ತದ ನಗದು ಹುಂಡಿ ಹಾಗೂ ದಾಖಲೆಗಳೊಂದಿಗೆ ಮೇ 31ರ ಒಳಗಾಗಿ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಲು ಕೋರಲಾಗಿದೆ.
ವಾದ್ಯ ತರಬೇತಿಗೆ ಅರ್ಜಿ ಆಹ್ವಾನ
ಬಳ್ಳಾರಿ: ಕರ್ನಾಟಕ ಜಾನಪದ ಅಕಾಡೆಮಿಯು ವಾಲಗ, ತಮಟೆ, ಚೌಡಿಕೆ, ಲಂಬಾಣಿ ವಾಜ್ಜ (ವಾದ್ಯಗಳು) ನಗಾರಿ, ಚಿಟ್‌ಮೇಳ, ಗಣೇವಾದ್ಯ, ತತ್ವಪದ, ಜಗ್ಗಲಿಗೆ, ನೀಲಗಾರರ ಪದ (ಮಂಟೇಸ್ವಾಮಿ), ಶಹನಾಯಿ ವಾದನದಲ್ಲಿ ತರಬೇತಿ ನೀಡ ಬಯಸುವ ಗುರುಗಳಿಂದ ಅರ್ಜಿ ಆಹ್ವಾನಿಸಿದೆ.  ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 2013-14ನೇ ಸಾಲಿಗಾಗಿ ಈ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಸಕ್ತ ಗುರುಗಳು ಸಂಬಂಧಿಸಿದ ಅರ್ಜಿ ನಮೂನೆಗಳ ಪ್ರತಿಯನ್ನು ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು ಇವರ ಕಚೇರಿಯಿಂದ ನೇರವಾಗಿ ಇಲ್ಲವೇ ಅಂಚೆ ಮೂಲಕ ಪಡೆಯಬಹುದು. ಅಂಚೆ ಮೂಲಕ ರು. 10 ಸ್ಟ್ಯಾಂಪ್ ಹಚ್ಚಿದ ಸ್ವವಿಳಾಸವುಳ್ಳ ಲಕೋಟೆಯನ್ನು ಅಕಾಡೆಮಿ ಕಚೇರಿಗೆ ಕಳುಹಿಸುವ ಮೂಲಕ ಪಡೆಯಬಹುದು ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ, ಬಳ್ಳಾರಿ. ಇವರ ಕಚೇರಿಯಿಂದಲೂ ಅರ್ಜಿ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಮೇ 31ರೊಳಗೆ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560002, ಇವರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ. 080-22215509ನ್ನು ಸಂಪರ್ಕಿಸಿ.
ಯುವಕ ನಾಪತ್ತೆ
ಹೊಸಪೇಟೆ: ಇಲ್ಲಿನ ಪಟೇಲ್‌ನಗರದ ನಿವಾಸಿ ಯುವರಾಜ್ ನಾಯ್ಕರ ಪುತ್ರ ಪ್ರತಾಪ್ ವೈ. (21) ಬುಧವಾರ ನಾಪತ್ತೆಯಾಗಿದ್ದಾನೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮೇ 21ರಂದು ಬೆಳಗ್ಗೆ 5.30ಕ್ಕೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವನು ಕೆಲಸಕ್ಕೂ ಹೋಗದೇ ಸಂಬಂಧಿಕರ ಮನೆಗೂ ಹೋಗಿಲ್ಲ. ನಾಪತ್ತೆಯಾಗಿರುವ ಕುರಿತು ಯುವಕನ ತಂದೆ ಯುವರಾಜ್‌ನಾಯ್ಕ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.  ಕಾಣೆಯಾದ ಪ್ರತಾಪ್ 5.5 ಅಡಿ ಎತ್ತರ, ಕೋಲು ಮುಖ, ಗೋದಿ ಕೆಂಪು ಮೈಬಣ್ಣ, ತೆಳುವಾದ ಮೈಕಟ್ಟು ಹೊಂದಿದ್ದು, ಕನ್ನಡ, ಹಿಂದಿ, ಲಮಾಣಿ ಭಾಷೆಗಳಲ್ಲಿ ಮಾತನಾಡುತ್ತಾನೆ. ಕಂಡರೆ ನಗರ ಠಾಣೆ (08394-224033)ಗೆ ತಿಳಿಸಲು ಪೊಲೀಸರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement