ಕಳಪೆ ಬೀಜ: ಪ್ರತಿಭಟನೆ
ಕೂಡ್ಲಿಗಿ: ತಾಲೂಕಿನಾದ್ಯಂತ ಖಾಸಗಿ ಕೃಷಿ ಕೇಂದ್ರಗಳಲ್ಲಿ ಕಳಪೆ ಬೀಜ ಮತ್ತು ರಸೀದಿ ಇಲ್ಲದೆ ದುಬಾರಿ ಬೆಲೆಗೆ ರಸಗೊಬ್ಬರ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ತಡೆಯಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಬೀಜ ವಿತರಿಸುವಂತೆ ಆಗ್ರಹಿಸಿ ತಾಲೂಕು ಕರವೇ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಕರವೇ ತಾಲೂಕು ಅಧ್ಯಕ್ಷ ಕಾಟೇರ್ ಹಾಲೇಶ್ ಮಾತನಾಡಿ, ಕೃಷಿ ಅವಲಂಬಿತರೆ ಹೆಚ್ಚಿರುವ ತಾಲೂಕಿನಲ್ಲಿ ಖಾಸಗಿ ಕೃಷಿ ಕೇಂದ್ರಗಳಲ್ಲಿ ರೈತರು ಬೀಜ, ಗೊಬ್ಬರ ಖರೀದಿಸಿದರೆ ಬಿಲ್ ನೀಡದೇ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆ ಪಡೆಯುತ್ತಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸುತ್ತಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಕಳಪೆ ಬೀಜ ಮಾರುವ ಕೇಂದ್ರಗಳ ಪರವಾನಗಿ ರದ್ದುಗೊಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯದರ್ಶಿ ರಾಘವೇಂದ್ರ ಸಾಲುಮನಿ ಮಾತನಾಡಿ, ಸಕಾಲಕ್ಕೆ ಸರಿಯಾಗಿ ರೈತರಿಗೆ ಬೀಜ, ಗೊಬ್ಬರ ಪೂರೈಸಲು ಇಲಾಖೆ ಕ್ರಮ ಕೈಗೊಳ್ಳಬೇಕು. ಸಬ್ಸಿಡಿಯಲ್ಲಿ ಬೀಜ, ಗೊಬ್ಬರ ನೀಡಿ ರೈತರಿಗೆ ನೆರವಾಗಲಿ ಎಂದು ಒತ್ತಾಯಿಸಿದರು. ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ ಮತ್ತು ತಹಸೀಲ್ದಾರ್ ಎಲ್. ಕೃಷ್ಣಮೂರ್ತಿ ಮನವಿ ಸ್ವೀಕರಿಸಿ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಪದಾಧಿಕಾರಿಗಳಾದ ಕಕ್ಕುಪ್ಪಿ ಹನುಮಂತಪ್ಪ, ಮಹಿಳಾ ಅಧ್ಯಕ್ಷೆ ಜಿ. ಲಕ್ಷ್ಮಿದೇವಿ, ಕಾರ್ಯದರ್ಶಿ ಆಶಾ, ಉಜ್ಜಿನಿ ಜಿ.ಸಿದ್ದೇಶ್, ಉಮಾರ್, ಜರ್ಮಲಿ ಸಿದ್ಧಪ್ಪನಾಯಕ ದೊರೆ, ಧನಲಕ್ಷ್ಮಿ, ನೀಲಮ್ಮ, ಬಸಕ್ಕ, ಸಿದ್ಧಮ್ಮ, ವಿನೋದಮ್ಮ, ಸಾವಿತ್ರಿ, ಎಂ. ನಾಗರಾಜ, ಗೌರಮ್ಮ, ಕಾಳಮ್ಮ, ರವಿಕುಮಾರ್, ಮಹಾಂತೇಶ್, ಮಲ್ಲಿಕಾರ್ಜುನ, ಚಿತ್ತಪ್ಪ, ಕೆ.ಕುಮಾರ್ ಇತರರಿದ್ದರು. ಗಾಂಧಿ ಚಿತಾಭಸ್ಮ ಸ್ಮಾರಕದಿಂದ ತಹಸೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು.