ಜೂ. 4ರಂದು ಎರ್ರಿಸ್ವಾಮಿ ರಥೋತ್ಸವ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 23
ಜಿಲ್ಲೆಯ ಧಾರ್ಮಿಕ ಕ್ಷೇತ್ರ ಚೇಳ್ಳಗುರ್ಕಿಯಲ್ಲಿ ರು. 33 ಲಕ್ಷ ವೆಚ್ಚದಲ್ಲಿ ಮಹಾದ್ವಾರವನ್ನು ನಿರ್ಮಿಸಲಾಗಿದ್ದು, ಜೂ. 2ರಂದು ಉದ್ಘಾಟಿಸಲಾಗುತ್ತದೆ. ಜೂ. 4ರಂದು ಶ್ರೀ ಎರ್ರಿಸ್ವಾಮಿ ಮಹಾರಥೋತ್ಸವ ಹಾಗೂ ಜೂ. 5ರಂದು ಹೂವಿನ ರಥೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಎರ್ರಿಸ್ವಾಮಿ ಟ್ರಸ್ಟ್ ಕಮಿಟಿ ಅಧ್ಯಕ್ಷರಾದ ಎಚ್. ಬಾಳನಗೌಡ ತಿಳಿಸಿದರು.
ಶುಕ್ರವಾರ ಚೇಳ್ಳಗುರ್ಕಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿಕೊಂಡು ಬಂದಿದ್ದು, ಅಂತೆಯೇ ಈ ಬಾರಿ ವಿಶೇಷವಾಗಿ ರು. 33 ಲಕ್ಷ ವೆಚ್ಚದಲ್ಲಿ ಮಹಾದ್ವಾರವನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೆ ತಾತನ ಪವಾಡಗಳನ್ನು ತಿಳಿಸಲು ಕ್ಷೇತ್ರದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇನ್ನು ಸರ್ಕಾರದ ವತಿಯಿಂದ ಯಾತ್ರಿನಿವಾಸ ನಿರ್ಮಾಣವಾಗಿದ್ದು, ಇನ್ನು ಉದ್ಘಾಟನೆ ಆಗಬೇಕಾಗಿದೆ. ಇನ್ನು ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದರು.
ಜೂ. 4ರಂದು ನಡೆಯುವ ಮಹಾರಥೋತ್ಸವದ ಅಂಗವಾಗಿ ಮೇ 28ರಂದು ಬೆಳಗ್ಗೆ 6 ಗಂಟೆಯಿಂದಲೇ ನಂದಿ ಧ್ವಜಾರೋಹಣ ಹಾಗೂ ಸಪ್ತಭಜನೆ ಕಾರ್ಯಕ್ರಮ ಆರಂಭವಾಗಲಿದೆ. ಅಂದು ರಾತ್ರಿ 7 ಗಂಟೆಗೆ ಬೆಳ್ಳಿ ರಥೋತ್ಸವ ಕಾರ್ಯಕ್ರಮ ನಡೆಯಲಿದೆ. ಸತತವಾಗಿ ಏಳು ದಿನಗಳ ಕಾಲ ಸಪ್ತಭಜನೆ ಕಾರ್ಯಕ್ರಮ ನಡೆಯಲಿದೆ. ಇನ್ನು ಜೂ. 2ರಂದು ಬೆಳಗ್ಗೆ 6.45ಕ್ಕೆ ಶ್ರೀ ಎರ್ರಿಸ್ವಾಮಿ ಜೀವಸಮಾಧಿ ಕ್ಷೇತ್ರದ ಮಹಾದ್ವಾರದ ಉದ್ಘಾಟನೆ ನಡೆಯಲಿದೆ. ಬೆಳಗಾವಿ ಜಿಲ್ಲೆಯ ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳು ಉದ್ಘಾಟನೆ ಮಾಡಲಿದ್ದಾರೆ. ಹಂಪಿ ಹೇಮಕೂಟದ ಶಿವರಾಮ ಅವಧೂತ ಆಶ್ರಮದ ವಿದ್ಯಾನಂದ ಭಾರತಿ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಜೂ. 3ರಂದು ಸಂಜೆ 6 ಗಂಟೆಗೆ ಬಸವನ ಉತ್ಸವ ನಡೆಯಲಿದೆ, ಅಂದು ರಾತ್ರಿ 10 ಗಂಟೆಗೆ ವಟುಗಳ ದೀಕ್ಷಾ ಕಾರ್ಯಕ್ರಮ ನಡೆಯಲಿದ್ದು, ಜೂ. 4ರಂದು ಬೆಳಗ್ಗೆ 6 ಗಂಟೆಗೆ ಸಪ್ತಭಜನೆ ಮುಕ್ತಾಯ ಕಾರ್ಯಕ್ರಮ ನಡೆಯಲಿದೆ. ಜೂ. 4ರಂದು 5 ಗಂಟೆಗೆ ಮಹಾರಥೋತ್ಸವ ಕಾರ್ಯಕ್ರಮ ನಡೆಯಲಿದೆ. ಇನ್ನು ನಂತರ ಕರ್ಪೂರದ ಆರತಿ ಕಾರ್ಯಕ್ರಮ ನಡೆಯಲಿದೆ. ಜೂ.5ರಂದು ರಾತ್ರಿ 7 ಗಂಟೆಗೆ ಹೂವಿನ ರಥೋತ್ಸವ ಕಾರ್ಯಕ್ರಮ ನಡೆಯಲಿದೆ. ನಂತರ ಬಾಣೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಎರಡು ದಿನಗಳ ಕಾಲ ನಡೆಯುವ ಮಹಾರಥೋತ್ಸವಕ್ಕೆ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ ಜಾತ್ರಾಮಹೋತ್ಸವ ಸಿದ್ಧತೆಯನ್ನು ಕೈಗೊಳ್ಳಲಾಗಿದೆ. ಇದೀಗ 90 ವಸತಿ ಕೋಣೆಗಳಿದ್ದು, ಹೊಸದಾಗಿ ಇನ್ನು 45 ಕೋಣೆಗಳು ಸಿದ್ಧವಾಗುತ್ತಿವೆ. ಇನ್ನು ನಿತ್ಯವು ಎರಡು ಬಾರಿ ದಾಸೋಹ ಸೇವೆಯನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದರು. ಇನ್ನು ಚೇಳ್ಳಗುರ್ಕಿಯ ಅಶ್ವಿನಿ ಅಂಗಡಿ ಅವರು ಗಾರ್ಡನ್ ಬ್ರೌನ್ ಪ್ರಶಸ್ತಿ ಪಡೆದಿದ್ದು, ಅವರಿಗೆ ದೇವಸ್ಥಾನದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಅಶ್ವಿನಿ ಅಂಗಡಿ ಆರಂಭಿಸಿರುವ ಅಂಗವಿಕಲ ಶಾಲೆಗೆ ರು. 20 ಸಾವಿರ ವೆಚ್ಚದಲ್ಲಿ ಪೀಠೋಪಕರಣ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ದಾಸೋಹ ಸೇವಾ ಸಂಘದ ಅಧ್ಯಕ್ಷ ವೈ.ಎಸ್. ಎರ್ರೆಣ್ಣ, ಟ್ರಸ್ಟ್ ಕಮಿಟಿ ಹಾಗೂ ಸೇವಾ ಸಂಘದ ಸದಸ್ಯರಾದ ವಿರೂಪಾಕ್ಷಗೌಡ, ಕಲ್ಲುಕಂಬ ಮಲ್ಲಿಕಾರ್ಜುನಗೌಡ, ಕರಿಬಸವನಗೌಡ, ಭೀಮನಗೌಡ, ಎಚ್. ಶಶಿಧರ, ನಾಗರಾಜ್ ಸೇರಿದಂತೆ ಇತರರು ಇದ್ದರು.