ಸಹಕಾರದಿಂದ ಸರ್ವರ ಅಭಿವೃದ್ಧಿ
ಕನ್ನಡಪ್ರಭ ವಾರ್ತೆ, ಸಿರುಗುಪ್ಪ, ಮೇ 23
ಸಹಕಾರದಿಂದ ಮಾತ್ರ ಎಲ್ಲ ವರ್ಗದ ಜನರು ಅಭಿವೃದ್ಧಿ ಹೊಂದಲು ಸಾಧ್ಯವೆಂದು ಪಿ.ಎಲ್.ಡಿ. ಬ್ಯಾಂಕಿನ ಅಧ್ಯಕ್ಷ ಎಚ್. ಪಾಲಾಕ್ಷರೆಡ್ಡಿ ಹೇಳಿದರು.
ಪಟ್ಟಣದ ಶ್ರೀ ಅಭಯಾಂಜನೇಯ ದೇವಸ್ಥಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭ್ರಮರಾಂಬ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಸಿರುಗುಪ್ಪ ಶಾಖೆಯ ವಾರ್ಷಿಕ ಗ್ರಾಹಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಭ್ರಮರಾಂಬ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಶಿವಶರಣಪ್ಪ ಇತ್ಲಿ ಮಾತನಾಡಿದರು. ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಿಂದಾಗಿ ಗ್ರಾಹಕರು ಸಹಕಾರ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ವ್ಯವಹರಿಸಬಹುದಾಗಿದೆ. ಬಂದ ಲಾಭದಲ್ಲಿ 14 ಡಿವಿಡೆಂಟ್‌ನ್ನು ಸದಸ್ಯರಿಗೆ ವಿತರಿಸಲಾಗುವುದು. ನಮ್ಮ ಶಾಖೆಯಲ್ಲಿ ವಿವಿಧೋದ್ದೇಶಗಳಿಗೆ ನಿಗದಿತ ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುತ್ತದೆ ಎಂದು ಅವರು ಬ್ಯಾಂಕಿನ ಪ್ರಗತಿಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಉತ್ತಮ ಗ್ರಾಹಕ ಪ್ರಶಸ್ತಿಯನ್ನು ಜಗನ್ನಾಥರಾವ್ ಹಾಗೂ ಜಯಲಕ್ಷ್ಮೀ ಪತಿ ನಾಗನಗೌಡರಿಗೆ ಅಧ್ಯಕ್ಷ ಡಾ. ಶಿವಶರಣಪ್ಪ ಇತ್ಲಿ ನೆನಪಿನ ಕಾಣಿಕೆ ವಿತರಿಸಿದರು.
ಇದೇ ವೇಳೆ ದ್ವಿತೀಯ ಪಿಯುನಲ್ಲಿ ಅತಿ ಹೆಚ್ಚು ಅಂಕಗಳಿಸಿದ ಶಿವಕುಮಾರ, ವೀಣಾ, ಎಸ್ಸೆಸ್ಸೆಲ್ಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಅಕ್ಷಿತಾ ಜೈನ್, ಎಂ.ಎಸ್. ಬಾಷರನ್ನು ಸನ್ಮಾನಿಸಲಾಯಿತು.
ಪ್ರಥಮ ಚಿಕಿತ್ಸೆ ಕುರಿತು ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹ ಕಾರ್ಯದರ್ಶಿ ಡಾ. ಮಧುಸೂಧನ ಕಾರಿಗನೂರು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು. ಕಾರ್ಯಕ್ರಮದಲ್ಲಿ ಎಂ. ಶಿವಶಂಕರಗೌಡ, ಕೆ.ನಾಗನಗೌಡ, ಎಚ್.ಕೆ. ನಾಗನಗೌಡ, ರಾಜೇಂದ್ರನಾಯಕ್, ವೀರೇಶಪ್ಪ, ಜಿ. ಜಡೆಯ್ಯ ಹಿರೇಮಠ್, ಸಿರುಗುಪ್ಪ ಭ್ರಮರಾಂಭ ಶಾಖೆಯ ವ್ಯವಸ್ಥಾಪಕ ಎಸ್.ಆನಂದ್ ಇನ್ನಿತರರು ಉಪಸ್ಥಿತರಿದ್ದರು.