ಹೈನುಗಾರಿಕೆ ತರಬೇತಿ
ಬಳ್ಳಾರಿ: ಬಾಗಲಕೋಟೆಯ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರವು ಕುರಿ, ಆಡು ಮತ್ತು ಹೈನುಗಾರಿಕೆ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದೆ. ಶಿಬಿರದಲ್ಲಿ ಅಧಿಕ ಆದಾಯಕ್ಕಾಗಿ ಅನುಸರಿಸಬೇಕಾದ ಆಧುನಿಕ ಪದ್ಧತಿಗಳು, ಹಣಕಾಸಿನ ನಿರ್ವಹಣೆ ಮತ್ತಿತರ ವಿಷಯಗಳಲ್ಲಿ ತರಬೇತಿ ನೀಡಲಾಗುವುದು. ರೈತರು, ರೈತ ಮಹಿಳೆಯರು, ಸ್ವಸಹಾಯ ಸಂಘದ ಸದಸ್ಯರು, ಯುವಕರು ತರಬೇತಿಯಲ್ಲಿ ಭಾಗವಹಿಸಬಹುದಾಗಿದ್ದು, ಆಸಕ್ತರು ತಮ್ಮ ಹೆಸರು, ವಿಳಾಸ, ದೂರವಾಣಿ, ಮೊಬೈಲ್ ವಿವರಗಳನ್ನು ಮೇ 28ರೊಳಗಾಗಿ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ. ಸಂಘದ ಸ್ಪನ್ನಿಂಗ್ ಆವರಣ, ಗದ್ದನಕೇರಿ ರೋಡ್, ಬಾಗಲಕೋಟೆ- 587103 ಇವರಲ್ಲಿ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ದೂ. 08354-244028,244048, ಮೊ. 8050502960 ಸಂಪರ್ಕಿಸಬಹುದಾಗಿದೆ. ಭಾಗವಹಿಸುವವರಿಗೆ ಉಚಿತ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕಾರ್ಯನಿರ್ವಾಹಕ ನಿರ್ದೇಶಕ ಬಿ.ಆರ್. ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೀನುಗಾರಿಕೆ: ಅರ್ಜಿ ಆಹ್ವಾನ
ಬಳ್ಳಾರಿ: ಮೀನುಗಾರಿಕಾ ಇಲಾಖೆಯಿಂದ ಮೀನು ಹಿಡಿಯುವವರಿಗೆ ಪಾಶವಾರು (ಮೀನು ಹಿಡಿಯಲು ಗುತ್ತಿಗೆ ಪಡೆಯುವ)ಹಕ್ಕು ಪಡೆಯಲು ಆಸಕ್ತ ಮೀನುಗಾರರ ಸಹಕಾರ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯ ಹೂವಿನ ಹಡಗಲಿ, ಕೂಡ್ಲಿಗಿ ಹಾಗೂ ಹಗರಿಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಮೀನು ಹಿಡಿಯುವ ಹಕ್ಕನ್ನು ನೇರ ಗುತ್ತಿಗೆ ಪಡೆಯಲು ಆಯಾ ತಾಲೂಕುಗಳ ಮೀನುಗಾರಿಕೆ ಸಹಕಾರಿ ಸಂಘಗಳು ಬಳ್ಳಾರಿಯ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಗುತ್ತಿಗೆ ಮೊತ್ತದ ನಗದುಹುಂಡಿ ಹಾಗೂ ದಾಖಲೆಗಳೊಂದಿಗೆ ಮೇ 31ರೊಳಗಾಗಿ ಸಲ್ಲಿಸಬಹುದಾಗಿದೆ.