ಕಾರ್ಮಿಕರ ಕುರಿತಾಗಿ ಸಾಹಿತ್ಯ ಕೃಷಿ ಮಾಡಿ
ಬಳ್ಳಾರಿ: ಸಾಹಿತಿಗಳು ಅಸಂಘಟಿತ ಕಾರ್ಮಿಕರ ಕುರಿತಾಗಿ ಸಾಹಿತ್ಯ ಕೃಷಿ ಮಾಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಾಗಿದೆ ಎಂದು ಅರ್ಥಶಾಸ್ತ್ರಜ್ಞ ಟಿ.ಆರ್. ಚಂದ್ರಶೇಖರ್ ಹೇಳಿದರು.
ಅಖಿಲ ಭಾರತ ಜನರಲ್ ಕೌನ್ಸಿಲ್ ಸಭೆ ನಿಮಿತ್ತ ನಗರದ ಗಾಂಧಿಭವನದಲ್ಲಿ ಭಾನುವಾರ ಸಿಐಟಿಯು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ದುಡಿವ ವರ್ಗದ ದೃಷ್ಟಿಕೋನ ಮತ್ತು ಸಮಸ್ಯೆಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಸಮಾಜದಲ್ಲಿ ಅಸಹಾಯಕರಾಗಿ ಬಳಲುತ್ತಿರುವ ಅಸಂಘಟಿತ ಕಾರ್ಮಿಕರ ಬಗ್ಗೆ ಸಾಹಿತಿಗಳು ಸಂಶೋಧನೆ ನಡೆಸಬೇಕಾಗಿದೆ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 60 ವರ್ಷ ಗತಿಸಿದರೂ ಅಸಂಘಟಿತ ಕಾರ್ಮಿಕರ ಶ್ರಮಕ್ಕೆ ತಕ್ಕ ಸೌಲಭ್ಯಗಳು ಸಿಗುತ್ತಿಲ್ಲ. ಅವರ ಜೀವನ ಮಟ್ಟ ಸುಧಾರಣೆಯಾಗಿಲ್ಲ. ಮೇಲ್ವರ್ಗದವರು ಅಭಿವೃದ್ಧಿ ಹೊಂದಿರುವವರೇ ಹೊರತು, ಕೆಳವರ್ಗದ ಕಾರ್ಮಿಕರು ಕೆಳ ಮಟ್ಟದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಇಂತಹ ವರ್ಗಗಳ ಎದುರಿಸುತ್ತಿರುವ ಸಮಸ್ಯೆಗಳು, ಸವಾಲುಗಳು ಕುರಿತಾಗಿ ಬೆಳಕು ಚೆಲ್ಲಿ, ಸಾಹಿತ್ಯದ ಮೂಲಕ ಸಂಬಂಧ ಪಟ್ಟವರ ಗಮನಕ್ಕೆ ತರವ ಕಾರ್ಯ ಆಗಬೇಕು ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚತುಷ್ಪಥ ರಸ್ತೆಗಳ ನಿರ್ಮಾಣ, ಹೈಟೆಕ್ ಸಿಟಿ ಮಾಡುವುದು ಸೇರಿದಂತೆ ಇತರ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿದೆ, ಇದರಿಂದಾಗಿ ಶ್ರಮಿಕರ ಬವಣೆ, ಕೃಷಿಕರ, ಗ್ರಾಮೀಣ ಭಾಗದ ಜನರ ಏಳಿಗೆ ಕಷ್ಟಸಾಧ್ಯವಾಗಿದೆ ಎಂದರು.
ವಿಮಾ ನೌಕರರ ಸಂಘದ ಟಿ.ಜಿ. ವಿಠಲ್, ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಗಣಪತಿ ಹೆಗಡೆ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸತ್ಯಬಾಬು, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಟಿ. ಮಲ್ಲೇಶ್, ಸೇರಿದಂತೆ ವಿವಿಧ ಸಂಘಟನೆಗಳ ಹುಳ್ಳಿ ಉಮೇಶ್, ಸಾಭಾನ್, ರಘುನಾಥ್ ಸೇರಿದಂತ ನೂರಾರು ಕಾರ್ಮಿಕರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದಾರೆ.