ಸಮಾಜಮುಖಿ ಚಿಂತನೆ ಅಗತ್ಯ: ಶಿಕ್ಷಕ ಮೂರ್ತಿ
ಹೂವಿನಹಡಗಲಿ: ಬದುಕಿನ ನಿರ್ವಹಣೆ ಜತೆಗೆ ಸಮಾಜ ಸುಧಾರಣೆಗಾಗಿ ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳಬೇಕೆಂದು ಶಿಕ್ಷಕ ಶಿಲ್ಪಿ ನಿರಂಜನ ಮೂರ್ತಿ ಹೇಳಿದರು.
ಪಟ್ಟಣದ ರಂಗಭಾರತಿ ರಂಗಮಂದಿರದಲ್ಲಿ ಶನಿವಾರ ತುಂಗಭದ್ರಾ ವಿದ್ಯಾ ಸಂಸ್ಥೆಯ 1998-99ನೇ ಸಾಲಿನ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, 1983ರಲ್ಲಿ ಪಟ್ಟಣದಲ್ಲಿ ಪ್ರಪ್ರಥಮ ಖಾಸಗಿ ವಿದ್ಯಾ ಸಂಸ್ಥೆಯಾಗಿ ತುಂಗಭದ್ರಾ ವಿದ್ಯಾಸಂಸ್ಥೆ ಸ್ಥಾಪನೆಯಾಗಿ ಈವರೆಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ ಎಂದರು.
ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಹತ್ತು ಹಲವು ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಸಾಂಸ್ಕೃತಿಕ, ಸಾಹಿತ್ಯಿಕ, ಕ್ರೀಡೆ ಅಲ್ಲದೇ ಶೈಕ್ಷಣಿಕ ಚಟುವಟಿಕೆಗಳನ್ನು ಇಲಾಖೆಯ ಸೂಚನೆಯಂತೆ ಕ್ರಮಬದ್ಧವಾಗಿ ಸಂಸ್ಥೆಯ ಶಾಲೆಗಳು ನೀಡುತ್ತಾ ಬಂದಿವೆ. ತಾಲೂಕಿನ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿರುವುದು ಶ್ಲಾಘನೀಯ ಎಂದರು.
ಕಲಾ ಶಿಕ್ಷಕ ದ್ವಾರಕೀಶ ರೆಡ್ಡಿ ಮಾತನಾಡಿ, ಈ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದೇ ನಮಗೆ ಹೆಮ್ಮೆಯ ಹಾಗೂ ಸಂತಸದ ಸಂಗತಿ ಎಂದರು.
ಶಿಕ್ಷಣ ಸಂಯೋಜಕ ಕೆ.ಎಂ. ವೀರೇಶ ತಮ್ಮ ವೃತ್ತಿ ಬದುಕಿನ ನೆನಪುಗಳನ್ನು ಹಂಚಿಕೊಂಡರು. ಶಿಕ್ಷಕ ಎಲ್. ಖಾದರ್ ಬಾಷಾ, ಎಚ್.ಎಂ. ಮೀರಾ, ಎಚ್. ಚನ್ನಪ್ಪ, ಎಚ್.ಎಂ. ಜ್ಯೋತಿ, ಮಲ್ಲಮ್ಮ, ಉಮಾದೇವಿ, ಎ.ಕಾಳಪ್ಪ ಮಾತನಾಡಿದರು. ಮುಖ್ಯ ಶಿಕ್ಷಕ ಸುರೇಶ ಅಂಗಡಿ ಅಧ್ಯಕ್ಷತೆವಹಿಸಿದ್ದರು. ಪ್ರಾಥಮಿಕ, ಪ್ರೌಢಶಾಲೆಗೆ ಕುಡಿಯುವ ನೀರಿನ ಶುದ್ಧೀಕರಣ ಘಟಕ ಮತ್ತು ಮಾಹಿತಿ ತಂತ್ರಜ್ಞಾನದ ವೆಬ್ಸೈಟ್ ದಾನದ ರೂಪದಲ್ಲಿ ನೀಡುವುದಾಗಿ ವಿದ್ಯಾರ್ಥಿಗಳು ಸಭೆಯಲ್ಲಿ ತಿಳಿಸಿದರು. ಸಂದೀಪ್, ಪ್ರಜ್ವಲ್ ಗುಂಜಾಳ್, ಟಿ.ಎಸ್. ಶಿಲ್ಪ, ರಶ್ಮಿ, ಕರಂಗಿ ಅಕ್ರಂ, ಗಡ್ಡಿ ಶ್ರೀಧರ್ ತಮ್ಮ ವಿದ್ಯಾರ್ಥಿ ಜೀವನದ ಅನುಭವ ಹಂಚಿಕೊಂಡರು. ಅಂಗಡಿ ಸುಷ್ಮಾ ಪ್ರಾರ್ಥಿಸಿದರು. ಎಂ.ಡಿ. ಪವನ್ ಸ್ವಾಗತಿಸಿದರು. ಸೊಪ್ಪಿನ ಸಂತೋಷ, ವಿನಾಯಕ ನಿರ್ವಹಿಸಿದರು.