ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಳ್ಳಾರಿಗೆ ಆನಂದ ತರುವರೇ ಗೌಡರು?

Vishwanath S
Updated On : 28 May 2014, 11:45 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 27
ರೇಲ್ವೆ ಇಲಾಖೆಗೆ ಪ್ರಮುಖ ಆದಾಯ ತಂದು ಕೊಡುವ ಬಳ್ಳಾರಿ ಜಿಲ್ಲೆಯ ಎರಡು ದಶಕಗಳ ಬೇಡಿಕೆಗಳು ಈಡೇರುವ ಆಸೆ ಮತ್ತೊಮ್ಮೆ ಚಿಗುರೊಡೆದಿದೆ. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಕೇಂದ್ರದಲ್ಲಿ ರೇಲ್ವೆ ಸಚಿವರಾಗಿದ್ದರಿಂದ, ಹಲವು ವರ್ಷಗಳ ಬೇಡಿಕೆಗಳು ಈಡೇರುವ ನಂಬಿಕೆ ಹೆಚ್ಚಿದೆ.
ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ರೇಲ್ವೆ ಸಚಿವರಾದರೂ, ಬಳ್ಳಾರಿ ಜಿಲ್ಲೆಯ ಬೇಡಿಕೆಗಳು ನಿರೀಕ್ಷೆಯಷ್ಟು ಈಡೇರಿಲ್ಲ. ಈ ಬಾರಿಯೂ ರಾಜ್ಯದವರೇ ರೇಲ್ವೆ ಸಚಿವರಾಗಿದ್ದರಿಂದ, ಐದು ವರ್ಷಗಳ ಅವಧಿಯಲ್ಲಿ ಒಂದಷ್ಟು ಕೊಡುಗೆ ನೀಡಬಲ್ಲರು ಎಂಬ ಆಶಾಭಾವ ಜಿಲ್ಲೆಯ ಜನರಲ್ಲಿ ಮೂಡಿದೆ. ಈ ಹಿಂದೆ ಹಲವು ಸಂದರ್ಭಗಳಲ್ಲಿ ರೇಲ್ವೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಜಿಲ್ಲೆಯ ಜನರು ಪ್ರತಿಭಟನೆ ನಡೆಸಿ, ಅಧಿಕಾರಿಗಳಿಗೆ, ರೇಲ್ವೆ ಸಚಿವರಿಗೆ ಮನವಿ ಸಲ್ಲಿಸಿದರೂ, ನಿರೀಕ್ಷಿತ ಪ್ರಮಾಣದಲ್ಲಿ ಬೇಡಿಕೆ ಈಡೇರಿಲ್ಲ. ಕೊಟ್ಟೂರು ಮತ್ತು ಹರಿಹರ ರೇಲ್ವೆ ಮಾರ್ಗ ಲೋಕಾರ್ಪಣೆಯಾಗಿದ್ದು ಬಿಟ್ಟರೆ, ಪ್ರಮುಖ ಬೇಡಿಕೆಗಳೆಲ್ಲವೂ ಭರವಸೆಗಳಾಗಿಯೇ ಉಳಿದಿವೆ.
ಮಾರ್ಗ ವಿದ್ಯುದೀಕರಣ: ಆಂಧ್ರಪ್ರದೇಶದ ಗುಂತಕಲ್‌ನಿಂದ ಹೊಸಪೇಟೆಯವರೆಗೆ 115 ಕಿ.ಮೀ.ಗಳ ವಿದ್ಯುದೀಕರಣ ರೈಲು ಮಾರ್ಗದ ಬೇಡಿಕೆ ಇದ್ದು, ಮಾರ್ಗಕ್ಕೆ ಅನುಮತಿ ಇದ್ದರೂ ಕಾರ್ಯಗತವಾಗಿಲ್ಲ. ಬಳ್ಳಾರಿಯಿಂದ ಚಿಕ್ಕಜಾಜೂರಿಗೆ 160 ಕಿ.ಮೀ. ಬ್ರಾಡ್‌ಗೇಜ್‌ನನ್ನು 15 ವರ್ಷಗಳಿಂದ ಹಾಕಿದರೂ, ಪ್ಯಾಸೆಂಜರ್ ಬಿಟ್ಟಂತೆ ಈ ತನಕ ಒಂದೂ ಎಕ್ಸ್‌ಪ್ರೆಸ್ ರೈಲು ಓಡಿಸುತ್ತಿಲ್ಲ. ಈ ಮಾರ್ಗದಲ್ಲಿ ಸೊಲ್ಲಾಪುರದಿಂದ ಮೈಸೂರಿಗೆ ಎಕ್ಸ್‌ಪ್ರೆಸ್ ರೈಲನ್ನು ಓಡಿಸಿದರೆ, ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ ಎನ್ನುವ ಅಭಿಪ್ರಾಯವಿದೆ.
ಬಿಜಾಪುರದ ಗೋಲ್‌ಗುಂಬಜ್, ಬಾಗಲಕೋಟೆಯ ಬಾದಾಮಿ, ಐಹೊಳೆ, ಹಾಸನದ ಶ್ರವಣಬೆಳಗೊಳ, ಬೇಲೂರು, ಹಳೇಬೀಡು, ಬಳ್ಳಾರಿ ಜಿಲ್ಲೆಯ ಹಂಪಿ, ತುಂಗಭದ್ರಾ ಜಲಾಶಯ, ಚಿತ್ರದುರ್ಗದ ಕಲ್ಲಿನಕೋಟೆ, ಮೈಸೂರು ಮುಂತಾದ ಪ್ರವಾಸಿ ತಾಣಗಳಿಗೆ ಸಂಪರ್ಕ ಸಾಧ್ಯವಾಗುತ್ತದೆ. ಗೌಡರು ಈ ಬೇಡಿಕೆ ಈಡೇರಿಸುವರೆಂಬ ನಿರೀಕ್ಷೆ ಗರಿಗೆದರಿದೆ.
ಆನಂದ ತರುವರೇ ಗೌಡರು?
ಒಂದೆರೆಡು ದಶಕಗಳಿಂದ ರೇಲ್ವೆ ಸೌಲಭ್ಯಕ್ಕಾಗಿ ಕಾದು ಕುಳಿತಿರುವ ಬಳ್ಳಾರಿ ಜಿಲ್ಲೆಯ ಜನರಿಗೆ ಸದಾನಂದಗೌಡರು ಆನಂದ ಕೊಡುವರೇ ಎಂಬ ಕುತೂಹಲವಿದೆ. ಪ್ರಮುಖ ರೇಲ್ವೆ ಬೇಡಿಕೆಗಳ ಕುರಿತಾಗಿ ಬಳ್ಳಾರಿಯ ಸಂಸದರಾಗಿರುವ ಬಿ. ಶ್ರೀರಾಮುಲು ಕೇಂದ್ರ ರೇಲ್ವೆ ಸಚಿವ ಸದಾನಂದಗೌಡರ ಮೇಲೆ ಒತ್ತಡ ಹೇರಿ, ಹಲವು ವರ್ಷಗಳ ರೇಲ್ವೆ ಬೇಡಿಕೆ ಈಡೇರಿಸಲು ಮುಂದಾಗಬೇಕಾಗಿದೆ.
ರೇಲ್ವೆ ಸಚಿವ ಸದಾನಂದಗೌಡ ಜಿಲ್ಲೆಯ ಜನರ ನಿರೀಕ್ಷೆಯನ್ನು ಈಡೇರಿಸಿ, ಬಳ್ಳಾರಿಗೆ ಅನುಕೂಲ ಮಾಡಿಕೊಡುವರೋ ಆಥವಾ ಹುಸಿ ಭರವಸೆಗಳ ರೈಲು ಬಿಡುತ್ತಾರೋ ಎಂದು ಕಾದು ನೋಡಬೇಕಾಗಿದೆ.
ಪ್ರಮುಖ ಬೇಡಿಕೆಗಳು
-  ಬಳ್ಳಾರಿಯಿಂದ ಗುಂತಕಲ್, ರಾಯಚೂರು, ಗುಲ್ಬರ್ಗ, ಸೊಲ್ಲಾಪುರ, ಬಿಜಾಪುರ, ಗದಗ, ಹೊಸಪೇಟೆ ಮಾರ್ಗವಾಗಿ ಬಳ್ಳಾರಿಗೆ ಓಡಿಸಬೇಕು. ಕ್ಲಾಕ್ ಆ್ಯಂಡ್ ಯ್ಯಾಂಟಿ ಕ್ಲಾಸ್‌ವೈಜ್ ರೈಲು ಓಡಿಸುವುದು.
-  ಹೊಸಪೇಟೆಯಿಂದ ಬೆಂಗಳೂರಿಗೆ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಓಡಿಸುವುದು. ಹುಬ್ಬಳ್ಳಿ -ಚೆನ್ನೈ ರೈಲು ಓಡಿಸಬೇಕು.
-  ಕೊಟ್ಟೂರು ಹರಿಹರ ರೈಲನ್ನು ಹೊಸಪೇಟೆಯವರೆಗೆ ವಿಸ್ತರಿಸಬೇಕು.
-  ವಾರಕ್ಕೆ 3 ಬಾರಿ ಓಡಿಸುವ ಎರಡು ರೈಲುಗಳು ಹಾಗೂ ವಾರಕ್ಕೆ ಒಂದು ಬಾರಿ ಓಡುವ ಮೂರು ಎಕ್ಸ್‌ಪ್ರೆಸ್ ರೈಲುಗಳಿವೆ. ವಾರಕ್ಕೆ 2-3 ಬಾರಿ ಓಡಿಸುವ ರೈಲನ್ನು ನಿತ್ಯ ಸಂಚರಿಸುವಂತಾಗಬೇಕು.


-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement