ಬೀಜ-ಗೊಬ್ಬರ ದಾಸ್ತಾನು: ಸಚಿವ ಪಿಟಿಪಿ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮೇ 27
ಜಿಲ್ಲೆಯಲ್ಲಿ ಮುಂಗಾರು ಚುರುಕಾಗಿದ್ದು, ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆಯಲ್ಲಿ ವ್ಯತ್ಯಯವಾಗದಂತೆ ದಾಸ್ತಾನು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರೈತರ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ ಮ್ತತು ರಸಗೊಬ್ಬರ ದಾಸ್ತಾನಿಗಾಗಿ ಕೃಷಿ ಇಲಾಖೆ ಮುಂಜಾಗ್ರತೆ ಕ್ರಮವಹಿಸಿದ್ದು, ರೈತರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಎಂದರು.
ಬಿತ್ತನೆ ಬೀಜ ದಾಸ್ತಾನು
22.5 ಕ್ವಿಂಟಲ್ ಹೈಬ್ರೀಡ್ ಜೋಳ, 14.85 ಕ್ವಿಂಟಲ್ ಹೆಸರು, 51 ಕ್ವಿಂಟಲ್ ತೊಗರಿ, 7.5 ಕ್ವಿಂಟಲ್ ಸಜ್ಜಿ, 75 ಕ್ವಿಂಟಲ್ ಬತ್ತ, 400 ಕ್ವಿಂಟಲ್ ಮೆಕ್ಕೆಜೋಳ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ಈಗಾಗಲೇ ತಾಲೂಕಿನ ಸೊಸೈಟಿ ಮತ್ತು ಬಿತ್ತನೆ ಬೀಜ ಮತ್ತು ರಸಗೊಬ್ಬರ ಅಂಗಡಿ ಸೇರಿದಂತೆ ಒಟ್ಟು 1051 ವಿವಿಧ ಬಗೆಯ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಉಳಿದಂತೆ ರೈತರಿಗೆ ಬೇಡಿಕೆ ತಕ್ಕಂತೆ ಹೆಚ್ಚುವರಿ ಪ್ರಸ್ತಾವನೆ ಇದೆ ಎಂದರು.
ನಿಗದಿ ದರದಲ್ಲಿ ರಸಗೊಬ್ಬರ ಮಾರಾಟ
ಈ ಬಾರಿ ಡಿಎಪಿ ರಸಗೊಬ್ಬರ ಸೇರಿದಂತೆ ಇನ್ನಿತರ ರಸಗೊಬ್ಬರ ಮಾರಾಟ ಮಾಡುವಾಗ ಯಾವುದೇ ತೆರನಾದ ಜಿಂಕ್ ಮತ್ತು ಇತರೆ ಔಷಧಿವನ್ನು ಲಿಂಕ್ ಮಾಡಿ ಮಾರಾಟ ಮಾಡುವಂತಿಲ್ಲ. ಸರ್ಕಾರ ನಿಗದಿ ಮಾಡಿರುವ ಮಾರುಕಟ್ಟೆ ಬೆಲೆಯಂತೆ ರಸಗೊಬ್ಬರ ಮಾರಾಟ ಮಾಡಬೇಕು. ಕೃತಕ ಬೇಡಿಕೆ ಸೃಷ್ಟಿ ಮಾಡಿ ರಸಗೊಬ್ಬರದ ಬೆಲೆಯನ್ನು ಯಾವುದೇ ಕಾರಣಕ್ಕೂ ಹೆಚ್ಚುವರಿ ಬೆಲೆ ಮಾರಾಟ ಮಾಡಿದರೆ ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ರಾಜ್ಯದಲ್ಲಿ ಕನಕ ಬಿಟಿ ಹತ್ತಿ ಬೀಜ ಕಳಪೆಯಾಗಿದ್ದು, ಇದರಿಂದ ಸಾಕಷ್ಟು ರೈತರು ಬಿತ್ತನೆ ಮಾಡಿ ನಷ್ಟ ಅನುಭವಿಸಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಕನಕ ಬಿಟಿ ಹತ್ತಿ ಬೀಜದಿಂದ ನಷ್ಟ ಅನುಭವಿಸಿರುವ ರೈತರ ಜಮೀನುಗಳಿಗೆ ಅಧಿಕಾರಿಗಳು ಭೇಟಿ ನೀಡಿ ಸರ್ವೇ ಮಾಹಿತಿ ಸರ್ಕಾರಕ್ಕೆ ಕಳಿಸುವುದು ವಿಳಂಬವಾಗಿರುವ ಹಿನ್ನೆಲೆ ಪರಿಹಾರ ವಿತರಣೆ ಮಾಡಲಾಗಿಲ್ಲ. ಈ ಕುರಿತು ಕೃಷಿ ಮಂತ್ರಿಗಳ ಜತೆ ಚರ್ಚೆ ಮಾಡಿದ್ದು, ಕೃಷಿ ಇಲಾಖೆಗೆ ಈಗಾಗಲೇ ಸರ್ಕಾರ ರೈತರಿಗೆ ಪರಿಹಾರ ನೀಡಲು ಅಗತ್ಯ ಹಣ ಬಿಡುಗಡೆ ಮಾಡಿದೆ. ಕಳಪೆ ಬಿತ್ತನೆ ಬೀಜ ಮಾರಾಟ ಮಾಡುತ್ತಿರುವ ಕಂಪನಿಗಳನ್ನು ರದ್ದು ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
111.5 ಮಿ.ಮೀ ಮಳೆ
ತಾಲೂಕಿನಲ್ಲಿ 66.9 ಮಿ.ಮೀ ವಾಡಿಕೆ ಮಳೆಯಲ್ಲಿ 111.5 ಮಿ.ಮೀ ವಾಡಿಕೆಗಿಂತ ಹೆಚ್ಚುವರಿ ಮಳೆಯಾಗಿದೆ. ತಾಲೂಕಿನಲ್ಲಿ 3 ರೈತ ಸಂಪರ್ಕ ಕೇಂದ್ರಗಳಿದ್ದು, ಇಟ್ಟಿಗಿ, ಹಿರೇಹಡಗಲಿ ಮತ್ತು ಹೂವಿನಹಡಗಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ಶೇ. 50 ರಿಯಾಯ್ತಿ ದರದಲ್ಲಿ ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐಗೋಳ್ ಚಿದಾನಂದ, ಎಂ. ಪರಮೇಶ್ವರಪ್ಪ, ಜಿಪಂ ಸದಸ್ಯ ಜಿ. ವಸಂತ, ಅರವಳ್ಳಿ ವೀರಣ್ಣ, ಜ್ಯೋತಿ ಮಲ್ಲಣ್ಣ ಉಪಸ್ಥಿತರಿದ್ದರು.