ಬ್ಯಾರೇಜ್ ನಿರ್ಮಾಣ ಸ್ಥಳ ಪರಿಶೀಲಿಸಿದ ಶಾಸಕ
ಹಗರಿಬೊಮ್ಮನಹಳ್ಳಿ: ತಾಲೂಕಿನ ಹಗರಿಕ್ಯಾದಿಗಿಹಳ್ಳಿ ಗ್ರಾಮದ ಬಳಿ ತುಂಗಭದ್ರಾ ನದಿಗೆ ಅಡ್ಡವಾಗಿ ಕುಡಿವ ನೀರಿಗಾಗಿ ಬ್ಯಾರೇಜ್ ನಿರ್ಮಿಸುವ ಕುರಿತಂತೆ ಮಂಗಳವಾರ ಮಧ್ಯಾಹ್ನ ಶಾಸಕ ಎಸ್. ಭೀಮಾನಾಯ್ಕ ಸಣ್ಣನೀರಾವರಿ ಇಲಾಖೆ ಅಭಿಯಂತರು ಹಾಗೂ ಗ್ರಾಮಸ್ಥರ ಜೊತೆಗೂಡಿ ಉದ್ದೇಶಿತ ಯೋಜನಾ ಸ್ಥಳ ಪರಿಶೀಲನೆ ನಡೆಸಿದರು.
ಮಧ್ಯಾಹ್ನ ಗ್ರಾಮಕ್ಕೆ ಭೇಟಿ ನೀಡಿದ ಶಾಸಕರು, ಗ್ರಾಮಸ್ಥರ ಜೊತೆಗೂಡಿ ಕಾಲ್ನಡಿಗೆಯಲ್ಲಿ ನದಿ ದಂಡೆಗೆ ಬಂದು ಬ್ಯಾರೇಜ್ ನಿರ್ಮಿಸಲು ಗ್ರಾಮಸ್ಥರು ಗೊತ್ತುಪಡಿಸಿರುವ ಸ್ಥಳವನ್ನು ಕೂಲಂಕಷವಾಗಿ ಪರಿಶೀಲಿಸಿ, ಬ್ಯಾರೇಜ್ ನಿರ್ಮಾಣ ಸಂಬಂಧಿಸಿದಂತೆ ತ್ವರಿತವಾಗಿ ಕಾಮಗಾರಿ ಪ್ರಸ್ತಾವನೆಯನ್ನು ತಯಾರಿಸುವಂತೆ ಸ್ಥಳದಲ್ಲಿ ಹಾಜರಿದ್ದ ಸಣ್ಣನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಈಶ್ವರಯ್ಯಗೆ ಹೇಳಿದರು.
ಇದಕ್ಕೂ ಮುನ್ನ ಗ್ರಾಮಸ್ಥರ ಪರವಾಗಿ ಮುಖಂಡ ಮರಿಕೊಟ್ರಪ್ಪ, ಬೇಸಿಗೆ ಕಾಲದಲ್ಲಿ ನಮ್ಮ ಗ್ರಾಮ ಸೇರಿದಂತೆ ಅಕ್ಕಪಕ್ಕದ ಹತ್ತಾರು ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಸಾಕಷ್ಟು ಉಲ್ಬಣಗೊಳ್ಳುತ್ತದೆ. ಆದ್ದರಿಂದ ದಯವಿಟ್ಟು ಬ್ಯಾರೇಜ್ ನಿರ್ಮಿಸಿಕೊಡುವಂತೆ ಶಾಸಕರಲ್ಲಿ ಭಿನ್ನವಿಸಿಕೊಂಡರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಮಾತನಾಡಿದ ಶಾಸಕರು, ಯೋಜನೆಯ ಪ್ರಸ್ತಾವನೆಯನ್ನು ಸಿದ್ಧಪಡಿಸುವಂತೆ ಅಧಿಕಾರಿಗೆ ಸೂಚಿಸಿರುವೆ, ಪ್ರಸ್ತಾವನೆ ಸಿದ್ಧವಾದ ಮೇಲೆ ಮುಖ್ಯಮಂತ್ರಿ, ನೀರಾವರಿ ಇಲಾಖೆ ಸಚಿವರನ್ನು ಭೇಟಿಯಾಗಿ ನಿಮ್ಮ ಪರವಾಗಿ ಪ್ರಸ್ತಾವನೆ ಸಲ್ಲಿಸುವ ಕೆಲಸ ಮಾಡುವೆ ಎಂದರು.
ಜಿಪಂ ಸದಸ್ಯ ರೋಗಾಣಿ ಹುಲುಗಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣಂರಾಜು, ಸದಸ್ಯ ಹೂಗಾರ ಮಲ್ಲಣ್ಣ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಡೇದ ಗುರುಬಸವರಾಜ, ವೀರಶೈವ ಪಂಚಮಸಾಲಿ ಸಂಘದ ತಾಲೂಕಾಧ್ಯಕ್ಷ ಅಕ್ಕಿ ಶಿವಣ್ಣ, ಹಗರಿಬೊಮ್ಮನಹಳ್ಳಿ ಗ್ರಾಪಂ ಅಧ್ಯಕ್ಷ ಜಿ.ಎಂ. ಶಿವಕುಮಾರ, ಮುಖಂಡರಾದ ವರದಾಪುರಕುಮಾರ, ನರಸಿಂಹರಾಜು, ಹಂಚಿನಮನಿ ಹನುಮಂತಪ್ಪ, ಸಣ್ಣನೀರಾವರಿ ಇಲಾಖೆ ಎಇ ಪರಮೇಶ್ವರಪ್ಪ, ಯಮುನನಾಯ್ಕ, ಸೋಮು ಭಾಗವಹಿಸಿದ್ದರು.