ಸಂಹಿತೆಗೆ ಅಂಜಿ ಸಿಇಒ ವಸತಿಗೃಹ ತೊರೆದ ಶಾಂತಾ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 27
ಲೋಕಸಭೆ ಮಾಜಿ ಸದಸ್ಯೆ ಜೆ. ಶಾಂತಾ ವಾಸಿಸುತ್ತಿದ್ದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ವಸತಿ ಗೃಹವನ್ನು ತೆರವುಗೊಳಿಸಲು ಕೊನೆಗೂ ಲೋಕಸಭಾ ಚುನಾವಣೆ ನೀತಿ ಸಂಹಿತೆಯೇ ಅಸ್ತ್ರವಾಯಿತು.
ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕರಿಗೆ ಹಾಗೂ ಸಂಸದರಿಗೆ ಒಂದು ಕಚೇರಿ ಬಿಟ್ಟರೆ ವಸತಿ ಗೃಹಗಳ ವ್ಯವಸ್ಥೆ ಇರುವುದಿಲ್ಲ. ಆದರೆ ಬಳ್ಳಾರಿಯ ಮಟ್ಟಿಗೆ ಹಿಂದಿನ ಲೋಕಸಭಾ ಸದಸ್ಯರ ಅವಧಿಯಲ್ಲಿ ಜಿಪಂ ಸಿಇಒ ವಾಸಿಸುವ ಸರ್ಕಾರದ ವಸತಿ ಗೃಹವನ್ನು ನೀಡಿದ್ದು ಅಚ್ಚರಿ ಮೂಡಿಸಿತ್ತು.
ಆರ್‌ಡಿಪಿಆರ್ ಇಲಾಖೆಯ ಆದೇಶ ತಂದು ಅಂದಿನ ಜಿಪಂ ಸಿಇಒ ರಾಜಾರಾಂ ಅವರನ್ನು ಬಿಡಿಸಿ, ಸಂಸದರು ಅದರಲ್ಲಿ ಇರತೊಡಗಿದ್ದರು. ಈ ಬಗ್ಗೆ ಯಾವೊಬ್ಬ ಅಧಿಕಾರಿಯೂ ಚಕಾರವೆತ್ತಿರಲಿಲ್ಲ. ಹಿಂದಿನ ಜಿಪಂ ಸಿಇಒ ಮಂಜುನಾಥ ನಾಯಕ್, ಜಿಲ್ಲಾಧಿಕಾರಿ ಬಿಸ್ವಾಸ್ ವಸತಿ ಗೃಹ ಬಿಡಿಸಿಕೊಡುವಂತೆ ಸರ್ಕಾರ ಮಟ್ಟದಲ್ಲಿ ಪತ್ರ ಬರೆದಿದ್ದರೂ ಫಲ ನೀಡಿರಲಿಲ್ಲ.
ತುಟಿ ಬಿಚ್ಚದ ಅಧಿಕಾರಿಗಳು
ಷರತ್ತು ಪಾಲನೆ ಆಗುವ ಮೊದಲೇ ಜಿಪಂ ಸಿಇಒ ತಮ್ಮ ವಸತಿಗೃಹ ಖಾಲಿ ಮಾಡಿದರು. ಆದರೆ ಮಂಜುನಾಥ ನಾಯಕ್ ಸಿಇಒ ಆಗಿ ಬಂದ ಮೇಲೆ, ಪರ್ಯಾಯ ವಸತಿ ವ್ಯವಸ್ಥೆ ಒದಗಿಸುವಂತೆ 2010ರ ಜ. 29ರಂದು ಇಲಾಖೆಗೆ ಪತ್ರ ಬರೆದರು. ಫೆ. 27, 2011ರಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಖಾಸಗಿ ವಸತಿ ಗೃಹಕ್ಕೆ ರು. 25 ಸಾವಿರ ಬಾಡಿಗೆ ನೀಡಲು ಅನುಮತಿ ಸೂಚಿಸಿದರು.
ನ. 11, 2011ರಲ್ಲಿ ಜಿಲ್ಲಾಧಿಕಾರಿಗಳು ಬಳ್ಳಾರಿ ಗ್ರಾಮೀಣ ಉಪಚುನಾವಣೆ ವೇಳೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಶಾಂತಾ ಅವರು ಜಿಪಂ ಸಿಇಒ ವಸತಿಗೃಹ ತೆರವುಗೊಳಿಸಲು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸೂಚಿಸುವಂತೆ ಜಿಲ್ಲಾಧಿಕಾರಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಜಿಪಂ ಅಧಿಕಾರಿಗಳೂ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಈ ಹಂತದಲ್ಲಿ ವಸತಿಗೃಹ ತೆರವುಗೊಳಿಸುವುದು ಸೂಕ್ತವಲ್ಲ ಎಂಬ ಪ್ರತಿಕ್ರಿಯೆ ಇಲಾಖೆಯಿಂದ ಬಂದಿತ್ತು.
ನೀತಿ ಸಂಹಿತೆ ಅಸ್ತ್ರದ ಪ್ರಯೋಗ
ಜೂ. 20, 2009ರ ಸರ್ಕಾರಿ ಆದೇಶದ ಬಳಿಕ ಸಂಸದೆ ಶಾಂತಾ ಜಿಪಂ ಸಿಇಒ ಸರ್ಕಾರಿ ನಿವಾಸದಲ್ಲಿ ಕಚೇರಿ ಮಾಡಿಕೊಂಡು ವಾಸವಾಗಿದ್ದರು.
ಅವರನ್ನು ಬಿಡಿಸುವ ಪ್ರಯತ್ನ ಫಲ ನೀಡಲಿಲ್ಲ. ಕೊನೆಗೆ ಈ ಸಲದ ಲೋಕಸಭಾ ಚುನಾವಣೆಯಲ್ಲಿ ನೀತಿ ಸಂಹಿತೆ ಮುಂದಿಟ್ಟುಕೊಂಡು ಮಾ. 5, 2014ರಂದು ಜಿಲ್ಲಾ ಚುನಾವಣಾಧಿಕಾರಿಗಳು ಸಂಸದೆ ಶಾಂತಾಗೆ ಪತ್ರ ಬರೆದು, ಸಿಇಒ ವಸತಿಗೃಹ ತೆರವುಗೊಳಿಸುವಂತೆ ತಿಳಿಸಿದ್ದರು. ಮಾ. 6ರಂದು, ಜಿಪಂ ವತಿಯಿಂದ ಪತ್ರ ಬರೆಯಲಾಗಿತ್ತು. ಏ. 2ರಂದು ಶಾಂತಾ ವಸತಿಗೃಹ ತೆರವುಗೊಳಿಸಿದರು. ಈಗ ಅದರಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹ್ಮದ್ ಸಲಾವುದ್ದೀನ್ ವಾಸಿಸುತ್ತಿದ್ದಾರೆ.
ಶಾಂತಾ ವಸತಿಗೃಹ ಪಡೆದಿದ್ದು ಹೇಗೆ?
ಮೇ 27, 2009ರಂದು ಅಂದಿನ ಪ್ರವಾಸೋದ್ಯಮ ಸಚಿವ ಜಿ. ಜನಾರ್ದನ ರೆಡ್ಡಿ ಡಿಸಿಗೆ ಪತ್ರ ಬರೆದು, ಲೋಕಸಭಾ ಸದಸ್ಯೆ ಶಾಂತಾ ಕಚೇರಿಗೆ ಸೂಕ್ತ ಕಟ್ಟಡ ಬೇಕಾಗಿದೆ. ಅದಕ್ಕೆ ಜಿ.ಪಂ. ಸಿಇಒ ಅವರಿಗೆ ಹಂಚಿಕೆ ಮಾಡಿರುವ ವಸತಿ ಗೃಹವನ್ನು ನೀಡಬೇಕೆಂದು ಪತ್ರ ಬರೆದಿದ್ದರು. ಜಿಲ್ಲಾಧಿಕಾರಿ ಅಂದೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದರು. ಇಲಾಖೆ ಕಾರ್ಯದರ್ಶಿಗಳು ಜೂ. 20, 2009ರಂದು ಡಿಸಿಗೆ ಪತ್ರ ಬರೆದು, ಜಿಪಂ ಸಿಇಒ ಅವರ ಹುದ್ದೆ ಮತ್ತು ಸ್ಥಾನಕ್ಕೆ ತಕ್ಕುದಾದ ಪರ್ಯಾಯ ವಸತಿ ಗೃಹದ ವ್ಯವಸ್ಥೆ ಬಳಿಕ ಸಂಸದರಿಗೆ ಸಿಇಒ ಸರ್ಕಾರಿ ನಿವಾಸ ನೀಡಬೇಕೆಂದು ತಿಳಿಸಿದ್ದರು. ಆದರೆ, ಶಾಂತಾ ಅಲ್ಲಿ ಠಿಕಾಣಿ ಹೂಡಿಯೇ ಬಿಟ್ಟರು.
-ಶಶಿಧರ ಮೇಟಿ