ಆಲಿಕಲ್ಲು ಮಳೆ: ಮರ ಉರುಳಿ ಮನೆ ಜಖಂ
ಹೊಸಪೇಟೆ: ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ಶುಕ್ರವಾರ ರಾತ್ರಿ ಗುಡುಗು-ಮಿಂಚು, ಗಾಳಿ ಮಿಶ್ರಿತವಾದ ಆಲಿಕಲ್ಲು ಮಳೆ ಸುರಿದ ಪರಿಣಾಮ ಅನೇಕ ಮರಗಳು ನೆಲಕ್ಕುರುಳಿ ಬಿದ್ದಿದ್ದು, ಮರಿಯಮ್ಮನಹಳ್ಳಿಯಲ್ಲಿ ಮನೆಯೊಂದರ ಮೇಲೆ ಮರವೊಂದು ಬಿದ್ದು ಮನೆ ಜಖಂಗೊಂಡಿದೆ.
ಮರಿಯಮ್ಮನಹಳ್ಳಿ 4ನೇ ವಾರ್ಡ್ನ ನಿವಾಸಿ ವಡ್ರ ಚಿನ್ನಪ್ಪ ಎಂಬುವರ ಮನೆಯ ಮೇಲೆ ಮರವೊಂದು ಬಿದ್ದು ಮನೆಯ ಗೋಡೆ ಒಡೆದಿದ್ದು ಮತ್ತು ಮನೆಯ ಚಾವಣಿಯ ಶೀಟ್ಗಳು ಒಡೆದಿವೆ. ಮನೆಯಲ್ಲಿರುವ ಅಡುಗೆ ಪಾತ್ರೆಗಳು ಹಾಗೂ ದವಸ ಧಾನ್ಯಗಳು ಹಾಳಾಗಿವೆ. ಯಾವುದೇ ಪ್ರಾಣ ಹಾನಿ ಆಗಿಲ್ಲ.
ಮನೆಯೊಳಗೆ ನೀರು ನುಗ್ಗಿ ಮನೆಯಲ್ಲಿರುವ ದವಸ ಧಾನ್ಯಗಳು, ಅಡುಗೆ ಪಾತ್ರೆಗಳು ಹಾಗೂ ಬಟ್ಟೆಗಳು ನೆನೆದಿವೆ. ಘಟನಾ ಸ್ಥಳಕ್ಕೆ ಸ್ಥಳೀಯ ನಾಡಕಚೇರಿಯ ಹಾಗೂ ಗ್ರಾಪಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮರಿಯಮ್ಮನಹಳ್ಳಿಯ ಗ್ರಾಮ ಪಂಚಾಯಿತಿ ಸಮೀಪದ ಹುಲಿಗೆಮ್ಮ ದೇವಸ್ಥಾನ ಮುಂದಿನ ದೊಡ್ಡ ಬೇವಿನ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದಿದೆ. ಮರಿಯಮ್ಮನಹಳ್ಳಿಯ ಜೆಸ್ಕಾಂ ಕಚೇರಿಯ ಆವರಣದಲ್ಲೂ ಸುಮಾರು 4 ಮರಗಳು ನೆಲಕ್ಕುರುಳಿ ಬಿದ್ದಿವೆ. ಇದೇ ರೀತಿಯಲ್ಲಿ ಮರಿಯಮ್ಮನಹಳ್ಳಿ, ನಂದಿಬಂಡೆ, ಅಯ್ಯನಹಳ್ಳಿ, ಡಣಾಯನಕನಕೆರೆ, ಗೊಲ್ಲರಹಳ್ಳಿ, ಜಿ. ನಾಗಲಾಪುರ, ಗರಗ, ದೇವಲಾಪುರ, ತಿಮ್ಮಲಾಪುರ, ವೆಂಕಟಾಪುರ, ಚಿಲನಕನಹಟ್ಟಿ, ಹಾರನಹಳ್ಳಿ ಸೇರಿದಂತೆ ಇತರೆ ಗ್ರಾಮಗಳಲ್ಲಿ 50ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ.