ಬೀದರ್: ಬಸವಾದಿ ಶರಣರ ತತ್ವಗಳು ಸರ್ವಕಾಲಿಕ ಶ್ರೇಷ್ಠವಾಗಿದ್ದು, ಜೀವನದಲ್ಲಿ ಪ್ರತಿಯೊಬ್ಬರು ಈ ದಿವ್ಯ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕೆಂದು ಜಹಿರಾಬಾದ್ನ ರಾಚಯ್ಯ ಸ್ವಾಮಿ ಅವರು ನುಡಿದರು.
ನಗರದ ಬಸವ ಕೇಂದ್ರದಲ್ಲಿ ಶಿವಯೋಗಿ ಪರಿವಾರದಿಂದ ಹಮ್ಮಿಕೊಂಡಿರುವ ಶರಣ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶರಣ ಸಂದೇಶಗಳ ಪ್ರಾಮುಖ್ಯತೆಯನ್ನು ಇತರರಿಗೂ ತಿಳಿ ಹೇಳಬೇಕು ನಿಜ ಜೀವನದಲ್ಲಿ ಆಚರಣೆಗೆ ತಂದಾಗ ಜೀವನ ಸಮೃದ್ದಿಗೊಳ್ಳುವುದೆಂದರು.
ಬಸವಕೇಂದ್ರದ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ ಮಾತನಾಡಿ, ಅವಿಭಕ್ತ ಕುಟುಂಬಗಳು ನಾಶವಾಗುತ್ತಿವೆ ತಲೆಗೊಂದು ಒಲೆ ಹುಟ್ಟಿ ಸಹೋದರರೆಲ್ಲರೂ ಬೇರೆ ಬೇರೆಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಜ್ಞಾನ ವಿಜ್ಞಾನಗಳು ಹೆಚ್ಚಾಗುತ್ತಿವೆ ಪ್ರೀತಿ ವಿಶ್ವಾಸಗಳು ಕಡಿಮೆಯಾಗುತ್ತಿದೆ. ಕುಳಿತಲ್ಲಿಯೇ ದೇಶ ವಿದೇಶಗಳ ಸಂಪರ್ಕದಲ್ಲಿದ್ದೇವೆ ಆದರೆ, ನೆರೆ ಹೊರೆಯವರೊಂದಿಗೆ ಹಾಗೂ ನಮ್ಮ ಬಂಧುಗಳ ಜೊತೆ ಮಾತನಾಡುವ ಸೌಜನ್ಯವನ್ನೂ ತೋರುತ್ತಿಲ್ಲ. ಮನೆಯಲ್ಲಿ ಎಲ್ಲಾ ಪರಿಕರಗಳು ಇದ್ದು ಪರಸ್ಪರ ಪ್ರೀತಿ ಪ್ರೇಮ ಇಲ್ಲದಿದ್ದರೆ ಅದು ಮನೆಯೇ ಅಲ್ಲ ಅದೊಂದು ಸ್ಮಶಾನ ಇದ್ದ ಹಾಗೆ ಎಂದರು.
ಹಾಸ್ಯ ಕಲಾವಿದ ವೈಜಿನಾಥ ಸಜ್ಜನಶೆಟ್ಟಿ ಹಾಸ್ಯದ ಹೊನಲನ್ನು ಹರಿಸಿ ನೆರೆದಿದ್ದ ಜನರನ್ನು ನಗೆಗಡಲಲ್ಲಿ ತೇಲಾಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇತ್ತೀಚೆಗೆ ಸುಗಮ ಸಂಗೀತ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಪ್ರಶಸ್ತಿ ಪಡೆದ ಕಲಾವಿದ ಶಿವಲಿಂಗ ಯರಗಲ್ ಅವರನ್ನು ಸನ್ಮಾನಿಸಲಾಯಿತು. ಶಿವಕುಮಾರ ಸಾಲಿ, ವಿಶ್ವನಾಥ ಶಿವಯೋಗಿ ಇದ್ದರು. ಮಹಾದೇವಿ ಜಗನ್ನಾಥ ಶಿವಯೋಗಿ ಸ್ವಾಗತಿಸಿ ಪ್ರಶಾಂತ ಹೊನ್ನಾ ನಿರೂಪಿಸಿ ಅಲ್ಲಮಪ್ರಭು ನಾವದಗೇರೆ ವಂದಿಸಿದರು.