ಬೀದರ್: ವೀರಶೈವ, ಲಿಂಗಾಯತ ಎರಡೂ ಪದಗಳು ಸಮಾನಾರ್ಥದಿಂದ ಕೂಡಿದ್ದು, ಹೀಗಾಗಿ ಇವೆರಡೂ ಶಬ್ದಗಳು ಒಂದೇ ಆಗಿವೆ. ಇವು ಬೇರೆ ಬೇರೆ ಅಲ್ಲ ಅದಾಗ್ಯೂ ಕೆಲ ಸ್ವಾರ್ಥಿಗಳು ಉಂಟುಮಾಡಿರುವ ಊಹಾಪೋಹಗಳಿಗೆ ಸಮಾಜ ಬಾಂಧವರು ಕಿವಿಗೊಡಬಾರದು ಎಂದು ಶ್ರೀಶೈಲ ಶ್ರೀ ಅಕ್ಕಮಹಾದೇವಿ ಚೈತನ್ಯ ಕೇಂದ್ರದ ಸಂಚಾಲಕ ಡಾ. ರಾಜಶೇಖರ ಸ್ವಾಮೀಜಿ ಕರೆ ನೀಡಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಸ್ವಾಮೀಜಿ, ಸಾವಿರಾರು ವರ್ಷಗಳ ಇತಿಹಾಸವಿರುವ ಈ ಧರ್ಮವು ವಿವಿಧ ಹೆಸರುಗಳಿಂದ ಗುರುತಿಸಿರುವುದನ್ನು ಪ್ರಾಚೀನ ಗ್ರಂಥಗಳಿಂದ ತಿಳಿದು ಬರುತ್ತದೆ. ಈ ಭಾಷೆಯನ್ನು ಇಪ್ಪತ್ತೊಂದು ಹೆಸರುಗಳಿಂದ ವೀರಶೈವವನ್ನು ಕರೆಯಲಾಗುತ್ತಿದೆ. ಶಿವಧರ್ಮ, ಶಕ್ತಿವಿಶಿಷ್ಟಾದ್ವೈತ, ಪಾಶುಪತ, ವೀರಮಾಹೇಶ್ವರ, ಮಹಾಪ್ರತಿನ್, ಲಿಂಗಾಯತ, ಶಿರೋವ್ರತಿನ್, ಲಿಂಗವಂತ, ಲಿಂಗೀನ್, ಲಿಂಗಧಾರ್, ಲಿಂಗೀಬ್ರಾಹ್ಮಣ ಮುಂತಾದ ಹೆಸರುಗಳು ಇದರಲ್ಲಿ ಸೇರಿವೆ ಹೀಗಾಗಿ ವೀರಶೈವರೇ ಬೇರೆ ಲಿಂಗಾಯತರೇ ಬೇರೆ ಎನ್ನುವವರ ವಾದದಲ್ಲಿ ಯಾವುದೇ ಹುರುಳಿಲ್ಲಿ ಎಂದು ತಿಳಿಸಿದ್ದಾರೆ. ಬಸವಾದಿ ಶಿವಶರಣರು ವಚನ ಸಾಹಿತ್ಯದಲ್ಲಿ ಅನೇಕ ಸಾರಿ ವೀರಶೈವ ಪದ ಉಕ್ತಗೊಳಿಸಿರುವರು. ಸುಮಾರು 28 ಜನ ಶರಣರು ತಮ್ಮ 168 ವಚನಗಳಲ್ಲಿ 171 ಸಾರಿ ವೀರಶೈವ ಪದ ಬಳಸಿದ್ದಾರೆ. ಪಂಚ ಪೀಠಾಧೀಸ್ವರರ, ವಿರಕ್ತ ಮಠಾಧೀಶರ ಒಟ್ಟಾಭಿಪ್ರಾಯ ವೀರಶೈವ-ಲಿಂಗಾಯತ ಎರಡು ಒಂದೇ ಎಂಬುದು ಅಖಿಲ ಭಾರತ ವೀರಶೈವ ಮಹಾಸಭೆಯ ಏಕಾಭಿಪ್ರಾಯವನ್ನು ಜನಮನಕ್ಕೆ ತಲುಪಿಸುತ್ತಿರುವುದು ಸೂಕ್ತ ಕ್ರಮವಾಗಿದೆ ಎಂದು ರಾಜಶೇಖರ ಸ್ವಾಮೀಜಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಪಾಕಿಸ್ತಾನ ಬಾಂಬ್ ಸ್ಫೋಟಕ್ಕೆ ಕ್ರೈಸ್ತರ ಖಂಡನೆ
ಬೀದರ್: ಪಾಕಿಸ್ತಾನದ ಪೇಶಾವರದ ಆಲ್ ಸೇಂಟ್ಸ್ ಚರ್ಚ್ ಮೇಲೆ ಕಳೆದ ಭಾನುವಾರ ಅಲ್ಪಸಂಖ್ಯಾತ ಕ್ರೈಸ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಹೊರಬರುತ್ತಿರುವ ವೇಳೆ ಭಯೋತ್ಪಾದಕ ಸಂಘಟನೆಯವರು ಬಾಂಬ್ ಸಿಡಿಸಿ ಅನೇಕ ಅಮಾಯಕರನ್ನು ಕೊಂದಿರುವ ಅಮಾನವೀಯ ಘಟನೆಯನ್ನು ತೀವ್ರವಾಗಿ ಖಂಡಿಸುವುದಾಗಿ ಜಿಲ್ಲಾ ಕ್ರೈಸ್ತ್ ಸಮಾಜದ ಮುಖಂಡರು ಹೇಳಿಕೆ ನೀಡಿದ್ದಾರೆ. ಜಿಲ್ಲಾ ಕೈಸ್ತ ಸಮಾಜದ ಮುಖಂಡರಾದ ಕುಮಾರ ಈರಪ್ಪಾ, ಸುಂದರಾಜ ಮಾಳೆಗಾಂವ್, ಶಾಂತಕುಮಾರ ಚಿದ್ರಿ, ಎಂಎಂಸ್ ಶಿರೋಮಣಿ, ಸಿರಿಲ್ ಜಾರ್ಜ್, ಎಸ್ಪಿ ರಾಜಶೇಖರ್, ಧನರಾಜ ಗೋರನಳ್ಳಿ, ಸಾಮಸನ್ ಎದೇನ್ ಕಾಲೋನಿ, ಸುನೀಲ್ ಬಚನ್, ಇಮಾನ್ವೆಲ್ ಮುಕ್ತಿರಾಮ ಮುಂತಾದವರು ಅಮಾಯಕ ಜನರ ಸಾವಿಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಲ್ಲದೆ ಈ ರೀತಿ ಘಟನೆ ಮರಕಳಿಸದಿರುವಂತೆ ಆಳುವ ಸರ್ಕಾರಗಳು ಕ್ರಮ ಜರುಗಿಸಬೇಕಾಗಿದೆ ಎಂದು ಆಗ್ರಹಿಸಿದ್ದಾರೆ. ಇಂಥ ಅನಾಗರಿಕ ಕೃತ್ಯಗಳು ಮಾನವೀಯ ವಿರೋಧಿಗಳಾಗಿದ್ದು, ನಾಗರಿಕ ಸಮಾಜ ಖಂಡಿಸಲೇಬೇಕಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.