ಮುದ್ದೇಬಿಹಾಳ: ಪಟ್ಟಣದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ಆವರಣದಲ್ಲಿ ಜ. 23ರಂದು ಸಂಜೆ 4 ಗಂಟೆಗೆ ಕ್ರಿಯೇಟೀವ್ ಫ್ರೆಂಡ್ಸ್ ಅಸೋಶಿಯೇಶನ್ ಆಶ್ರಯದಲ್ಲಿ ಶಿಕ್ಷಕ ದಿ. ಬಸವರಾಜ ಕೆ. ಸಜ್ಜನ ಸ್ಮರಣಾರ್ಥ ಅವರ ಪತ್ನಿ ರೇಣುಕಾ ಸಜ್ಜನ ರಚಿಸಿದ ಮನದಾಳದ ಮಾತು ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಕೃಷ್ಣಾ ಕಾಡಾ ನಿಗಮಕ್ಕೆ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಆಲಮಟ್ಟಿ ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಕುಂಬಾರ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಸವನ ಬಾಗೇವಾಡಿಯ ಶಿವಾನಂದ ಕಲ್ಲೂರ ಮತ್ತು ಉಪ ವಿಭಾಗಾಧಿಕಾರಿಯಾಗಿ ಪದೋನ್ನತಿ ಹೊಂದಿ ವರ್ಗಾವಣೆಗೊಂಡಿರುವ ತಹಸೀಲ್ದಾರ ಸೋಮಲಿಂಗ ಗೆಣ್ಣೂರ ಅವರನ್ನೂ ಅಸೋಶಿಯೇಶನ್ ಮತ್ತು ನಾಗರಿಕರ ವತಿಯಿಂದ ಸನ್ಮಾನಿಸಲಾಗುತ್ತದೆ.
ಢವಳಗಿ ಗದ್ದುಗೆಮಠದ ಘನಮಠೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಅಸೋಶಿಯೇಶನ್ ಅಧ್ಯಕ್ಷ ಅಶೋಕ ರೇವಡಿ ಅಧ್ಯಕ್ಷತೆ ವಹಿಸುವರು. ರಾಜ್ಯ ವಕೀಲರ ಸಾಹಿತ್ಯ ಪರಿಷತ್ ಅಧ್ಯಕ್ಷ, ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಉದ್ಘಾಟಿಸುವರು. ಕರ್ನಾಟಕ ರಾಜ್ಯ ಚಲನಚಿತ್ರ(ಬೆಳ್ಳಿಮಂಡಲ)ಅಕಾಡೆಮಿಯ ಬಿಜಾಪುರ ಜಿಲ್ಲಾ ಉಪಾಧ್ಯಕ್ಷ ಶರಣು ಸಬರದ ಮತ್ತು ಎಂಜಿವಿಸಿ ಕಾಲೇಜು ಉಪನ್ಯಾಸಕ ಪ್ರೊ. ಎಸ್.ಎಸ್. ಹೂಗಾರ ಮುಖ್ಯ ಅತಿಥಿಗಳಾಗಿ ಆಗಮಿಸುವರು.