ಇಂಡಿ(ಬಿಜಾಪುರ): ಭೀಮಾನದಿಯಲ್ಲಿ ನಡೆಯುತ್ತಿರುವ ಅಂತಾರಾಜ್ಯ ಮರಳು ಮಾಫಿಯಾಕ್ಕೆ ತಾಲೂಕಿನ ಮೂವರು ಬಾಲಕಿಯರು ಬಲಿಯಾಗಿದ್ದಾರೆ.
ಗ್ರಾಮದೇವತೆ ಅಭಿಷೇಕಕ್ಕಾಗಿ ನದಿಯಲ್ಲಿ ನೀರು ತರಲು ಹೋದಾಗ ಮರಳು ಗಣಿಗಾರಿಕೆಗಾಗಿ ತೋಡಿದ ಗುಂಡಿಯೊಳಗೆ ಸಿಲುಕಿ ಬಾಲಕಿಯರು ಮೃತಪಟ್ಟಿದ್ದಾರೆ.
ಭಾಗ್ಯಶ್ರೀ ಸಿದ್ರಾಮ ಧೂಳೆ (13), ಭಾಗ್ಯಶ್ರೀ ಬಸವರಾಜ ಸುತಾರ(13) ಹಾಗೂ ಮಹಾನಂದ ಅಪ್ಪಶಾ ಅತನೂರ (12) ಮೃತರು. ನಾಲ್ಕು ಮಂದಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಘಟನೆಯಿಂದಾಗಿ ಉದ್ರಿಕ್ತರಾದ ಗ್ರಾಮಸ್ಥರು ಮಹಾರಾಷ್ಟ್ರ ತಹಸೀಲ್ದಾರ್ ಜೀಪ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ವಿವರ: ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಗಬ್ಬೇವಾಡದ ಗ್ರಾಮದೇವತೆ ಲಕ್ಷ್ಮೀದೇವಿಗೆ ಅಭಿಷೇಕ ಮಾಡಲು ಶುಕ್ರವಾರ ಮುಂಜಾನೆ ಈ ಮೂವರು ಬಾಲಕಿಯರು ಸೇರಿ ಏಳು ಮಂದಿ ಬಿಂದಿಗೆ ಹಿಡಿದು ನದಿಗೆ ಹೋಗಿದ್ದಾರೆ. ಆದರೆ ಈ ನದಿ ಭಾಗ ಮಹಾರಾಷ್ಟ್ರದ ವ್ಯಾಪ್ತಿಯಲ್ಲಿದ್ದು, ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಮರಳಿಗಾಗಿ ನದಿಯೊಳಗೆ ಕಂಡಕಂಡಲ್ಲಿ ಗುಂಡಿ ತೋಡಲಾಗಿದೆ. ಇದನ್ನರಿಯದ ಬಾಲಕಿಯರು ನೀರಿಗಿಳಿದಾಗ ಗುಂಡಿಯೊಳಗೆ ಸಿಲುಕಿದ್ದಾರೆ. ಮಕ್ಕಳ ಕೂಗು ಕೇಳಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ನಾಲ್ವರನ್ನು ರಕ್ಷಿಸಿದ್ದಾರೆ.