ಜಮಖಂಡಿ: ಕನ್ನಡ ಸಾಹಿತ್ಯದಲ್ಲಿ ರಾಷ್ಟ್ರಕವಿ ಎನಿಸಿಕೊಂಡವರು, ಜ್ಞಾನಪೀಠ ಪ್ರಶಸ್ತಿ ಪಡೆದವರು ಪಿತ್ತ ನೆತ್ತಿಗೇರಿದವರಂತೆ ವರ್ತಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ವಿದ್ವಾಂಸ ಡಾ.ಹಂ.ಪ. ನಾಗರಾಜಯ್ಯ ಟೀಕಿಸಿದ್ದಾರೆ. ರತ್ನತ್ರಯ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ ಆಶ್ರಯದಲ್ಲಿ ಶನಿವಾರ ಬಸವ ಭವನದ ಸಭಾಭವನದಲ್ಲಿ 2 ದಿನಗಳ ಆದಿಕವಿ ಪಂಪ- ಕವಿ, ಕಾವ್ಯ ಕುರಿತ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಸಾಹಿತಿಗಳು ಪ್ರಶಸ್ತಿಗಾಗಿ ಬಾಗಿಲು ಕಾಯುವುದನ್ನು ಬಿಟ್ಟು ಉತ್ತಮ ಕೃತಿ ಹೊರ ತರುವ ಕೆಲಸ ಮಾಡಲಿ. ಸಾಹಿತಿಗಳಾದ ನಾವು ಜವಾಬ್ದಾರಿಯಿಂದ ವರ್ತಿಸಬೇಕು. ನೈತಿಕತೆ, ಆದರ್ಶಗಳನ್ನು ಆಧಾರವಾಗಿಟ್ಟುಕೊಂಡು ಕೃತಿ ಹೊರತರಬೇಕು. ಪಂಪನಿಗೆ ಸಾಕಷ್ಟು ಬಿರುದು- ಬಾವಲಿಗಳು ಬಂದರೂ ಅವನಲ್ಲಿ ಅಹಂ ಇರಲಿಲ್ಲ. ಕನ್ನಡಕ್ಕೆ ಪಂಪ ಶ್ರೇಷ್ಠ ಕವಿ ಎಂದ ಅವರು, ನಮ್ಮ ದೇಶ, ಭಾಷೆ, ನೆಲ, ಜಲದ ಬಗ್ಗೆ ಕನ್ನಡಿಗರಲ್ಲಿ ಸ್ವಾಭಿಮಾನ ಬೆಳೆಸಿ, ಕನ್ನಡಾಭಿಮಾನದ ಕಿಚ್ಚು ಹಚ್ಚಿದವರಲ್ಲಿ ಪಂಪ ಅಗ್ರಗಣ್ಯ ಎಂದರು.