ಬಿಜಾಪುರ: ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ 2016ರ ಜುಲೈ 16ರಿಂದ ಮೊದಲ ಹಂತದಲ್ಲಿ 800 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಮೊದಲ ಘಟಕ ಕಾರ್ಯಾರಂಭ ಮಾಡಲಿದೆ ಎಂದು ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಬಾಲಾಜಿ ಅಯ್ಯಂಗಾರ ತಿಳಿಸಿದರು.
ಕೂಡಗಿ ಥರ್ಮಲ್ ಪಾವರ್ ಘಟಕದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2400 ಮೆಗಾವ್ಯಾಟ್ ಉತ್ಪಾದನೆಯ ಗುರಿಯಂತೆ ನಂತರದ 2-3 ತಿಂಗಳಲ್ಲಿ ಉಳಿದ ತಲಾ 800 ಮೆಗಾವ್ಯಾಟ್‌ನ 2 ಘಟಕಗಳ ಉತ್ಪಾದನೆ ಆರಂಭಿಸಲಾಗುವುದು. ಒಟ್ಟಾರೆ ತಲಾ 800 ಮೆಗಾ ವ್ಯಾಟ್‌ನಂತೆ 5 ಘಟಕಗಳ 4000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಯೋಜನೆ ಇದಾಗಿದೆ ಎಂದರು.
15 ದಿನಗಳ ಒಳಗಾಗಿ ಸ್ಥಾವರದಿಂದ ತಮ್ಮ ಊರಿಗೆ ತೆರಳಿರುವ 3,000 ಕಾರ್ಮಿಕರನ್ನು ವಾಪಸ್ ಕರೆಸಿ ಕಾಮಗಾರಿ ಆರಂಭಿಸಲಾಗುವುದು. ಮೊದಲ ಹಂತದ ಯೋಜನೆ 2016ರ ನಿಗದಿತ ಸಮಯಕ್ಕೆ ಮುಗಿಯಲಿದೆ ಎಂದರು.
ಜತೆಗೆ ಕನ್ನಡಿಗ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಸುಸೂತ್ರವಾಗಿ ನಿರ್ವಹಿಸುವ ಯೋಚನೆಯನ್ನು ಎನ್‌ಟಿಪಿಸಿ ಮಾಡಿದೆ. ಈ ನಿಟ್ಟಿನಲ್ಲಿ ದೇಶದ ಇತರ ಭಾಗದಲ್ಲಿ ಎನ್‌ಟಿಪಿಸಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕನ್ನಡಿಗ ಅಧಿಕಾರಿಗಳನ್ನು ಹುಡುಕಿ ಕೂಡಗಿ ಉಷ್ಣ ವಿದ್ಯುತ್ ಸ್ಥಾವರಕ್ಕೆ ಕರೆ ತರುವ ಪ್ರಕ್ರಿಯೆ ಆರಂಭಿಸಿದೆ. ಸ್ಥಳೀಯರಿಂದ ವಿರೋಧ ವ್ಯಕ್ತವಾಗುವುದನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.