ಬಿಜಾಪುರ: ಕೂಡಗಿ ಗೋಲಿಬಾರ್ ಪ್ರಕರಣದ ಮ್ಯಾಜಿಸ್ಟ್ರೇಟ್ ವಿಚಾರಣೆ ವರದಿಯನ್ನು ಆ.19ರೊಳಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಿ. ರಂದೀಪ್ ತಿಳಿಸಿದರು.
ಕೂಡಗಿ ವಿದ್ಯುತ್ ಸ್ಥಾವರದಲ್ಲಿ ಗೋಲಿಬಾರ್ ಪೂರ್ವದಲ್ಲಿನ ಪರಿಸ್ಥಿತಿಯ ವಾಸ್ತವಾಂಶ ಹಾಗೂ ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ ಹಾಗೂ ಗುಂಡು ಹಾರಿಸುವುದು ಅಗತ್ಯವಿತ್ತಾ ಎಂಬ ಅಂಶಗಳ ಬಗ್ಗೆ ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸಲಾಗುತ್ತಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಕರಣದ ವಿಚಾರಣೆ ಜು.26ರಂದೇ ಆರಂಭಿಸಲಾಗಿದೆ. ಜು. 26ರಂದು ಬೆಳಗಾವಿಗೆ ತೆರಳಿ ಕೆಎಲ್‌ಇ ಆಸ್ಪತ್ರೆಯಲ್ಲಿ ಗುಂಡೇಟಿನಿಂದ ಗಾಯಗೊಂಡ ಇಬ್ಬರು ರೈತರ ಹೇಳಿಕೆ ಪಡೆಯಲಾಗಿದೆ. ಚಿಕಿತ್ಸೆ ನೀಡಿದ ವೈದ್ಯರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಸಾಕ್ಷಿದಾರರಿಂದ ಹೇಳಿಕೆ ಬರೆಸಿಕೊಳ್ಳಲಾಗಿದೆ ಎಂದರು.
12 ಪೊಲೀಸರು, 7 ಕಂದಾ ಯ ಅಧಿಕಾರಿಗಳಿಗೆ ಹೇಳಿಕೆ ನೀಡಲು ನೋಟಿಸ್ ಜಾರಿ ಮಾಡಲಾಗಿದೆ. ಕಂದಾಯ ಅಧಿಕಾರಿಗಳು ತಮ್ಮ ಹೇಳಿಕೆ ನೀಡಿದ್ದಾರೆ. ಎಸ್ಪಿ ಸಹ ಸಾಕ್ಷಿ ಹೇಳಲಿದ್ದಾರೆ. 35ರಿಂದ 40 ಸಾಕ್ಷಿದಾರರ ಹೇಳಿಕೆಯನ್ನು ದಾಖಲಿಸಲಾಗುವುದು. ವಿಚಾರಣೆ ಪಾರದರ್ಶಕವಾಗಿ ನಡೆಯಲಿದ್ದು, ವಿಡಿಯೊ ಚಿತ್ರೀಕರಣ ಮಾಡಲಾಗುತ್ತದೆ ಎಂದರು.
30ರಂದು ಬಿಜಾಪುರ ಕಾರಾಗೃಹದಲ್ಲಿನ ರೈತರು, ಬಿಜಾಪುರದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಿದ ವೈದ್ಯರಿಂದಲೂ ಹೇಳಿಕೆ ದಾಖಲಿಸಿಕೊಳ್ಳಲಾಗುವುದು ಎಂದರು.