ಸಿಂದಗಿ: ತಾಲೂಕಿನ ಗುಬ್ಬೇವಾಡ ಗ್ರಾಮದ ಮತಗಟ್ಟೆ 216ರಲ್ಲಿ ಮಂಗಳವಾರ ನಡೆದ ಲೋಕಸಭೆ ಚುನಾವಣೆ ಮರು ಮತದಾನ ಶಾಂತಿ ಮತ್ತು ಸುವ್ಯವಸ್ಥೆಯಿಂದ ಜರುಗಿ, ಶೇ.68.8 ಮತದಾನವಾಗಿದೆ.
ಬೆಳಗ್ಗೆ ಮಂದಗತಿಯಲ್ಲಿ ಆರಂಭಗೊಂಡ ಮತದಾನ ಪ್ರಕ್ರಿಯೆ ಬಳಿಕ ಚುರುಕು ಪಡೆದುಕೊಂಡಿತು. ಮಂಗಳವಾರ ಅಮವಾಸ್ಯೆಯಾಗಿದ್ದರಿಂದ ಮಹಿಳೆಯರು ಪೂಜೆ-ಪುನಸ್ಕಾರಗಳಲ್ಲಿ ತೊಡಗಿಕೊಂಡಿದ್ದರಿಂದ ಬೆಳಗ್ಗೆ 10 ಗಂಟೆಯ ಬಳಿಕವೇ ಮತಗಟ್ಟೆಯತ್ತ ಸುಳಿಯಲಾರಂಭಿಸಿದರು.
ಮಧ್ಯಾಹ್ನ 12.30ಕ್ಕೆ ಸ್ವಇಚ್ಛೆಯಿಂದ ತನ್ನ ಮೊಮ್ಮಕ್ಕಳ ಆಸರೆಯಲ್ಲಿ ಮತಗಟ್ಟೆಗೆ ಬಂದು ಮತ ಚಲಾಯಿಸಿದ ಗ್ರಾಮದ ಶತಾಯುಷಿ ಅಜ್ಜಿ ನೀಲಗಂಗಮ್ಮ ಪಟ್ಟಣಶೆಟ್ಟಿ ಬಿರುಬಿಸಿಲಿಗಂಜಿ ಮತದಾನಕ್ಕೆ ಮುಂದಾಗದ ವಯಸ್ಕರು ನಾಚುವಂತೆ ಮಾಡಿದರು.
ಒಟ್ಟು 881 ಮತದಾರರಿರುವ ಈ ಮತಗಟ್ಟೆಯಲ್ಲಿ ಕಳೆದ ಏ.17ರಂದು ನಡೆದ ಚುನಾವಣೆಯಲ್ಲಿ ಒಟ್ಟು 568 ಮತಗಳು ಚಲಾವಣೆಗೊಂಡಿದ್ದವು. ಮರು ಮತದಾನದಲ್ಲಿ ಬೆಳಗ್ಗೆ 11. 30ಕ್ಕೆ 260 ಮತದಾನವಾಗಿದ್ದು ಮಧ್ಯಾಹ್ನ 2 ಗಂಟೆಯ ಬಳಿಕ 400ರ ಗಡಿ ತಲುಪಿತು. ಮತದಾನದ ಅವಧಿ ಕೊನೆಗೊಂಡಾಗ ಒಟ್ಟು 607 ಮತಗಳು ಚಲಾವಣೆಯಾಗುವ ಮೂಲಕ ಮೊದಲ ಬಾರಿಗೆ ಗ್ರಾಮದಲ್ಲಿ ಶೇ.68.8 ಮತದಾನವಾದ ದಾಖಲೆಗೆ ಪಾತ್ರವಾಯಿತು. ವಿವಿಧ ಪಕ್ಷಗಳ ಅಭ್ಯರ್ಥಿಗಳಾದ ಪ್ರಕಾಶ ರಾಠೋಡ (ಕಾಂಗ್ರೆಸ್), ಕೆ.ಶಿವರಾಂ (ಜೆಡಿಎಸ್), ಶ್ರೀಧರ ನಾರಾಯಣಕರ (ಆಮ್ ಆದ್ಮಿ) ಹಾಗೂ ಶಾಸಕ ರಮೇಶ ಭೂಸನೂರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಟಿ.ಸುಣಗಾರ ತಮ್ಮ ತಮ್ಮ ಬೆಂಬಲಿಗರೊಂದಿಗೆ ಗ್ರಾಮದ ವಿವಿಧೆಡೆ ಕುಳಿತು ರಾಜಕೀಯ ಲೆಕ್ಕಾಚಾರದಲ್ಲಿ ನಿರತರಾಗಿದ್ದರು.
ಪ್ರಕಾಶ ರಾಠೋಡ ಪತ್ನಿ ಸುಜಾತಾ ರಾಠೋಡ ಮತ್ತು ಜೆಡಿಎಸ್ ಅಭ್ಯರ್ಥಿ ಕೆ.ಶಿವರಾಂ ಪತ್ನಿ ವಾಣಿ ಶಿವರಾಂ ಗ್ರಾಮವೊಂದರ ಮನೆಯ ಮುಂದಿನ ಕಟ್ಟೆಯ ಮೇಲೆ ಕುಳಿತು ಪಕ್ಷಭೇದ ಮರೆತು ಉಭಯ ಕುಶಲೋಪರಿಯಲ್ಲಿ ತೊಡಗಿದ್ದರು. ಮತಗಟ್ಟೆ ಕೇಂದ್ರದ ಬಳಿ ಅತ್ಯಂತ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಸಿಪಿಐ ಗಂಗಾಧರ ಮಠ, ಸಿಂದಗಿ ಪಿಎಸೈ ರಂಗನಾಥ ನೀಲಮ್ಮನವರ, ಕಲಕೇರಿ ಪಿಎಸೈ ಕಣಮೇಶ್ವರ ಸೇರಿದಂತೆ ಅನೇಕ ಪೊಲೀಸರು ಇದ್ದರು.