ಬಿಜಾಪುರ: ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಮೇ 1ರಂದು ನಡೆಯಬೇಕಿದ್ದ ಬಾಲ್ಯ ವಿವಾಹ ತಡೆಯುವಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರ ತಂಡ ಯಶಸ್ವಿಯಾಗಿದೆ.
ಗ್ರಾಮದ ಕುಂಬಾರ ಓಣಿಯ ಶಶಿಕಲಾ (ಹೆಸರು ಬದಲಿಸಿದೆ) ಎಂಬುವಳ ಬಾಲ್ಯ ವಿವಾಹ ನಡೆಯುವ ಕುರಿತು ಏ. 27ರಂದು ಮಕ್ಕಳ ಸಹಾಯವಾಣಿಗೆ ಬಂದ ದೂರವಾಣಿ ಕರೆಯನ್ನು ಆಧರಿಸಿ ಏ. 28ರಂದು ಉಕ್ಕಲಿ ಗ್ರಾಮಕ್ಕೆ ತೆರಳಿದ ಮಕ್ಕಳ ಸಹಾಯವಾಣಿ ತಂಡ ಬಾಲಕಿಯ ಕುಟುಂಬವನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿ ಬಾಲ್ಯವಿವಾಹ ನಿಷೇಧ ಕಾನೂನು, ಬಾಲ್ಯವಿವಾಹ ಮಾಡಿದವರಿಗೆ ವಿಧಿಸುವ ಶಿಕ್ಷೆ, ಬಾಲ್ಯವಿವಾಹದಿಂದ ಬಾಲಕಿಯ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ತಿಳಿವಳಿಕೆ ನೀಡಲಾಯಿತು.
ಬಾಲ್ಯ ವಿವಾಹ ನಡೆಸದಂತೆ ಸಮುದಾಯದ ಮುಖಂಡರ ಮನವೊಲಿಸುವ ಮೂಲಕ ಮೇ 1ರಂದು ನಿಗದಿಯಾಗಿದ್ದ ಬಾಲ್ಯ ವಿವಾಹವನ್ನು ತಡೆಯುವಲ್ಲಿ ಮಕ್ಕಳ ಸಹಾಯವಾಣಿ ತಂಡ ಯಶಸ್ವಿಯಾಗಿದೆ. ಇದೇ ಸಂದರ್ಭದಲ್ಲಿ ಬಾಲಕಿಯ ಪೋಷಕರಿಂದ ಬಾಲ್ಯ ವಿವಾಹ ನಡೆಸುವುದಿಲ್ಲ ಎಂದು ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿದೆ. ಅದೇ ದಿನ ಮಧ್ಯಾಹ್ನ ಓಣಿಯ ಹಿರಿಯರ ಸಭೆ ನಡೆಸಿದ ಚೈಲ್ಡ್ ಲೈನ್-1098 ಸಂಯೋಜಕಿ ಸುನಂದಾ ತೋಳಬಂದಿ ಬಾಲ್ಯವಿವಾಹ ಮಾಡಿದ ಮಕ್ಕಳ ಪಾಲಕರಿಗೆ ಹಾಗೂ ಪಾಲ್ಗೊಂಡ ಹಿರಿಯರಿಗೆ ರು. 1 ಲಕ್ಷ ದಂಡ ಹಾಗೂ ಎರಡು ವರ್ಷಗಳ ಕಾರಾಗೃಹ ವಾಸ ವಿಧಿಸಲಾಗುವುದು ಎಂದು ತಿಳಿಸಿದರು.
ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆಯಿದ್ದಲ್ಲಿ ಉಚಿತ ದೂರವಾಣಿ 1098 ಅಥವಾ 08352222973 ಇಲ್ಲಿಗೆ ಕರೆ ಮಾಡಿ ದೂರು ದಾಖಲಿಸಿ ಸಮಸ್ಯೆಗೆ ಪರಿಹಾರ, ಪುನರ್ವಸತಿ ಪಡೆಯಬಹುದೆಂದು ತಿಳಿಸಿದರು.
ಈ ಕಾರ್ಯಾಚರಣೆಯಲ್ಲಿ ಮಕ್ಕಳ ಸಹಾಯವಾಣಿಯ ಜಿಲ್ಲಾ ಸಂಯೋಜಕಿ ಸುನಂದಾ ತೋಳಬಂದಿ, ತಂಡದ ಸದಸ್ಯರಾದ ಕಲ್ಮೇಶ ಬಗಲಿ, ಗೀತಾ ತುಪ್ಪದ, ರೇಣುಕಾ ಜುಮನಾಳ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಮಲಾ ವಾಗ್ಮೋರೆ, ಮೇಲ್ವಿಚಾರಕಿ ಶಾಲಿನಿ ಗುದಿಗೆನ್ನವರ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.