ದೇವರಹಿಪ್ಪರಗಿ: ಸಮೀಪದ ಚಟ್ಟರಕಿ ಗ್ರಾಮದಲ್ಲಿ ಗ್ರಾಮದ ಆರಾಧ್ಯ ದೈವ ಹನುಮಾನ ದೇವರ ಜಾತ್ರೆ ನಿಮಿತ್ತ ವಿವಿಧ ಗ್ರಾಮಗಳ ದೇವರ ಪಲ್ಲಕ್ಕಿ ಉತ್ಸವ ಈಚೆಗೆ ನಡೆಯಿತು.
ಜಾತ್ರೆಯ ಅಂಗವಾಗಿ ಹನುಮಾನ ಭಕ್ತ ಡಾ. ಸಂತೋಷ ಕುಲಕರ್ಣಿ ದಂಪತಿಯಿಂದ ಹೋಮ ಮತ್ತು ಬಿಜಾಪುರದ ಶಂಕರಭಟ್ ಅಗ್ನಿಹೋತ್ರಿ ಅವರ ನೇತೃತ್ವದಲ್ಲಿ ಪೂಜೆ ನಡೆಯಿತು. ಗ್ರಾಮದ ಬೀರಲಿಂಗೇಶ್ವರ ಹಾಗೂ ಹನುಮಾನ ದೇವರ ಪಲ್ಲಕ್ಕಿ ಮೆರವಣಿಗೆ ಜರುಗಿತು. ಪುರವಂತರ ಮೆರವಣಿಗೆ ಆಕರ್ಷಕವಾಗಿ ಕಂಡು ಬಂತು. ಜಾತ್ರೆಗೆ ಆಗಮಿಸಿದ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಇದಕ್ಕೂ ಮುಂಚಿನ ರಾತ್ರಿ ಮುದ್ದೇಬಿಹಾಳ ತಾಲೂಕಿನ ಗುಳಬಾಳ ಹಾಗೂ ಇಂಡಿ ತಾಲೂಕಿನ ಸಾಲೋಟಗಿ ಭಜನಾ ಮಂಡಳದಿಂದ ಜಾನಪದ ಹಾಡುಗಳ ಕಾರ್ಯಕ್ರಮ ನಡೆಯಿತು.
ಕರಿದೇವರ ಜಾತ್ರೆ: ಕಡ್ಲೆವಾಡ ಪಿಸಿ ಗ್ರಾಮದಲ್ಲಿ ಕರಿದೇವರ ಜಾತ್ರೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.
ಮಂಗಳವಾರ ಬೆಳಗ್ಗೆ ಗ್ರಾಮದ ಕರಿದೇವರ ಪಲ್ಲಕ್ಕಿ, ಬಸವೇಶ್ವರ ಪಲ್ಲಕ್ಕಿ, ಚಿಕ್ಕರೂಗಿಯ ಗುತ್ತಿಲಿಂಗೇಶ್ವರ, ಬಮ್ಮನಜೋಗಿಯ ಬೀರಲೀಂಗೇಶ್ವರ,ಚಟ್ಟರಕಿ ಬೀರದೇವರ ಪಲ್ಲಕ್ಕಿ ಹೀಗೆ ಐದೂರು ಗ್ರಾಮಗಳ ಪಲ್ಲಕ್ಕಿ ಉತ್ಸವ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಪಲ್ಲಕ್ಕಿಗಳೊಂದಿಗೆ ಭಕ್ತಿಯಿಂದ ಕುರಿಗಳನ್ನು ಸುತ್ತು ಹಾಕಿಸಿ ಪೂಜೆ ಸಲ್ಲಿಸುವ ಮೂಲಕ ಕರಿದೇವರ ದೇವಸ್ಥಾನಕ್ಕೆ ಕರೆ ತಂದ ನಂತರ ಮೆರವಣಿಗೆ, ಉತ್ಸವ ನಡೆಯುತ್ತದೆ. ಗ್ರಾಮದ ರೈತರು ತಮ್ಮ ಮನೆಯಲ್ಲಿನ ಕುರಿಗಳನ್ನು ಸ್ನಾನ ಮಾಡಿಸಿ ಪ್ರತಿಯೊಂದು ಕುರಿಯನ್ನು ಅಲಂಕರಿಸಿ ದೇವಸ್ಥಾನದ ಸುತ್ತು ಪ್ರದಕ್ಷಿಣೆ ಮಾಡಿಸಲಾಗುತ್ತದೆ.