ಚಾಮರಾಜನಗರ

ಸುತ್ತೂರು ಜಾತ್ರೆ ಶುರು


ಮೈಸೂರು: ಕಪಿಲಾ ನದಿ ತೀರದಲ್ಲಿರುವ ಸುತ್ತೂರು ಶ್ರೀಕ್ಷೇತ್ರದ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಶ್ರೀ ಶಿವರಾತ್ರೀಶ್ವರ ಶಿವಯೋಗಿಯವರ ಜಾತ್ರಾ ಮಹೋತ್ಸವವು ಬುಧವಾರ ಆರಂಭವಾಯಿತು.
ಬೆಳಗಿನ ಜಾವ ಕರ್ತೃ ಗದ್ದುಗೆಯಲ್ಲಿ ಮಹಾರುದ್ರಾಭಿಷೇಕ, ಸ್ನೇಹ, ಸೌಹಾರ್ದ, ಶಾಂತಿ ಪ್ರಾರ್ಥನಾ ಪಥಸಂಚಲನ, ಶ್ರೀ ಸೋಮೇಶ್ವರಸ್ವಾಮಿಗೆ ಶತಕುಂಬಾಭಿಷೇಕ, ತುಮ್ಮನೇರಳೆಯಲ್ಲಿ ಷಟ್ಸ್ಥಲ ಧ್ವಜಾರೋಹಣ, ಧರ್ಮ ಸಂದೇಶ, ಬೆಳ್ಳಿ ರಥ ಪ್ರಕಾರೋತ್ಸವದೊಂದಿಗೆ 6 ದಿನಗಳ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ದೊರೆಯಿತು. ಜಾತ್ರೆಯ ಅಂಗವಾಗಿ ಆಯೋಜಿಸಲಾಗಿರುವ ಕ್ರಿಕೆಟ್ ಪಂದ್ಯಾವಳಿಗೆ ಮಾಜಿ ಕ್ರಿಕೆಟಿಗ ಜಿ.ಆರ್. ವಿಶ್ವನಾಥ್, ದೇಸಿ ಆಟಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ಎಸ್. ರಾಮೇಗೌಡ, ದೋಣಿ ವಿಹಾರಕ್ಕೆ ಮಾಜಿ ಸಚಿವ ಎಂ. ಮಹದೇವ್, ಅಳಿಗುಳಿ ಮನೆ ಆಟಕ್ಕೆ ನಂಜನಗೂಡು ತಹಸೀಲ್ದಾರ್ ಪ್ರಿಯದರ್ಶಿನಿ ಚಾಲನೆ ನೀಡಿದರು.
ದೇಸಿ ಆಟಗಳು...: ಜೆಎಸ್ಎಸ್ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿರುವ ದೇಸಿ ಆಟಗಳು ಸ್ಪರ್ಧೆಯಲ್ಲಿ ಬಾಲಕರಿಗಾಗಿ ಗೋಲಿ, ಬುಗುರಿ, ಹುಲಿ- ಕುರಿ (48 ಕಲ್ಲು), ಗೆರೆ ಆಟ, ಸ್ಕೀಪ್ಪಿಂಗ್ ರೇಸ್, ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿದೆ. ಬಾಲಕಿಯರಿಗಾಗಿ ಅಣ್ಣೆ ಕಲ್ಲು, ಕುಂಟೋ ಬಿಲ್ಲೆ, ಅಳಿಗುಳಿ ಮನೆ, ಲೈನ್ ಆಟ, ಸ್ಕಿಪ್ಪಿಂಗ್ ರೇಸ್ ಆಯೋಜಿಸಲಾಗಿದ್ದು, 50 ಶಾಲೆಗಳಲ್ಲಿ 834 ವಿದ್ಯಾರ್ಥಿಗಳು ಈ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.
ಮಲ್ಲಕಂಬ ಪ್ರದರ್ಶನ: ಸುತ್ತೂರಿನ ಜೆಎಸ್ಎಸ್ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರಸ್ತುತಪಡಿಸಿದ ಮಲ್ಲಕಂಬ ಪ್ರದರ್ಶನವು ಮೈ ರೋಮಾಂಚನಗೊಳಿಸಿತು. ಶಿಕ್ಷಕ ಶ್ರೀಶೈಲ ಹೂಗಾರ್ ಅವರ ಮಾರ್ಗದರ್ಶನದಲ್ಲಿ ಮಲ್ಲಕಂಬ ಕಲಿತ ಬಾಲಕ, ಬಾಲಕಿಯರು ಪ್ರಸ್ತುತಪಡಿಸಿದ ಮಲ್ಲಗಂಬ ವಿವಿಧ ವಿಧಾನಗಳು ನೋಡುಗರನ್ನು ತೂದಿಗಾಲಿನಲ್ಲಿ ನಿಲ್ಲುವಂತೆ ಮಾಡಿತು.
ಮಕ್ಕಳ ಮಲ್ಲಕಂಬ ಪ್ರದರ್ಶನದಿಂದ ರೋಮಾಂಚನಗೊಂಡ ಅತಿಥಿ ಗಣ್ಯರು ಹಾಗೂ ಸ್ವಾಮೀಜಿಗಳು ಮಕ್ಕಳನ್ನು ಅಭಿನಂದಿಸಿದರು. ರಾಜ್ಯ ಮತ್ತು ರಾಷ್ಟ್ರಮಟ್ಟದ ಮಲ್ಲಕಂಬ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಆಟಗಾರರು ಮಲ್ಲಗಂಬ ಪ್ರದರ್ಶನದಲ್ಲಿ ತಮ್ಮ ಚಾಕಚಕ್ಯತೆ ಪ್ರದರ್ಶಿಸಿ ಗಮನ ಸೆಳೆದರು. ಕಲಾವಿದೆ ಗೌರಿ ಅವರು ಮರಳಿನಲ್ಲಿ ರೂಪಿಸಿರುವ ಶ್ರೀ ಶಿವರಾತ್ರೀಶ್ವರ ಶಿವಯೋಗಿಯವರ ಕಲಾಕೃತಿಯು ಆಕರ್ಷಕವಾಗಿದ್ದು, ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ. ದೋಣಿ ವಿಹಾರಕ್ಕೆ ಚಾಲನೆ ನೀಡಿದ ಮಾಜಿ ಸಚಿವ ಎಂ. ಮಹದೇವ್ ಮಾತನಾಡಿ, ಸುತ್ತೂರು ಶ್ರೀಕ್ಷೇತ್ರವು ಎರಡನೇ ಬಸವಕಲ್ಯಾಣ ಎಂಬುದರಲ್ಲಿ ಸಂಶಯ ಇಲ್ಲ ಎಂದು ಬಣ್ಣಿಸಿದರು.
ಮಠಗಳು ಧಾರ್ಮಿಕ ವಿಚಾರ, ಶಿಕ್ಷಣ, ಅನ್ನ ದಾಸೋಹಗಳಿಗೆ ಒತ್ತು ನೀಡುತ್ತಿವೆ. ಸುತ್ತೂರು ಮಠವು ರಾಷ್ಟ್ರ ಭಾವನೆಯನ್ನು ಎತ್ತಿ ಹಿಡಿದು, ದೇಶದ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಕೃಷಿ, ಕ್ರೀಡೆ, ಶಿಕ್ಷಣದ ಮೂಲಕ ದೇಶಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುತ್ತಿದೆ ಎಂದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿವಗಂಗೆಯ ಮಹಾಲಕ್ಷ್ಮಿ ಪೀಠದ ಜ್ಞಾನಾನಂದಪುರಿ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಮಾಜಿ ಕ್ರಿಕೆಟಿಗ ಅನಂತ್, ಸಿಎಫ್ಟಿಆರ್ಐ ನಿವೃತ್ತ ನಿರ್ದೇಶಕ ಡಾ.ವಿ. ಪ್ರಕಾಶ್, ಕಲಾವಿದ ನಾಗರಾಜ್, ಜೆಡಿಎಸ್ ಮುಖಂಡ ಕಳಲೆ ಕೇಶವಮೂರ್ತಿ, ಮೇಯರ್ ಎಂ.ಸಿ. ರಾಜೇಶ್ವರಿ ಪುಟ್ಟಸ್ವಾಮಿ, ಉಪ ಮೇಯರ್ ಮಹದೇವಪ್ಪ ಮೊದಲಾದವರು ಇದ್ದರು. ಪ್ರೊ.ಸುಬ್ಬಪ್ಪ ಸ್ವಾಗತಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!