ಗುಂಡ್ಲುಪೇಟೆ: ಪಟ್ಟಣದ ತೋಟಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಚಾಮರಾಜನಗರ ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ತಾಲೂಕಿನ ಪರಮಾಪುರ ಗ್ರಾಮದ ರೈತ ಮಧು ಬಿನ್ ಬಸಪ್ಪ ಎಂಬವರು ತಮ್ಮ ತೋಟದಲ್ಲಿ ಗ್ರೀನ್ಹೌಸ್ ನಿರ್ಮಾಣ ಮಾಡುವ ಸಂಬಂಧ 1.50 ಲಕ್ಷ, ಟಿಶ್ಯೂ ಕಲ್ಚರ್ ಬಾಳೆ ಬೆಳೆಯಲು ಎಕರೆಗೆ 12 ಸಾವಿರದಂತೆ ಸಬ್ಸಿಡಿ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಉಮೇಶ್ ಕುಮಾರ್ ರೈತ ಮಧು ಅವರಿಂದ 50 ಸಾವಿರ ಲಂಚ ಕೇಳಿದ್ದ. ಅವರು ಮೊದಲು 15 ಸಾವಿರ ನೀಡಿದ್ದು, ಉಳಿದ ಹಣವನ್ನು ಅರ್ಜಿಯೊಂದಿಗೆ ನೀಡುವಂತೆ ಒತ್ತಾಯಿಸಿದ್ದ. ಗುರುವಾರ 10 ಸಾವಿರ ಲಂಚ ಪಡೆಯುತ್ತಿದ್ದಾಗ ಚಾಮರಾಜನಗರ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ನಟರಾಜು ಬಂಧಿಸಿದ್ದಾರೆ.