ಗುಂಡ್ಲುಪೇಟೆ: ವಿಜಯನಾರಾಯಣ ಸ್ವಾಮಿ ರಥೋತ್ಸವ ರಥಸಪ್ತಮಿಯ ದಿನವಾದ ಭಾನುವಾರ ವೈಭವದಿಂದ ಜರುಗಿತು.
ಪಟ್ಟಣದ 3ನೇ ವಾರ್ಡಿನಲ್ಲಿರುವ ಪುರಾತತ್ವ ಇಲಾಖೆಗೆ ಸೇರಿದ ವಿಜಯ ನಾರಾಯಣ ಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷ ರಥಸಪ್ತಮಿಯಂದು ಸ್ವಾಮಿಗೆ ವಿವಿಧ ಬಗೆಯ ಅಲಂಕಾರಗಳನ್ನು ಮಾಡಿ ಪೂಜೆ ನೆರವೇರಿಸಲಾಗುತ್ತದೆ. ಅದರಂತೆ ಭಾನುವಾರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಬಿಜಂಗೈಯ್ಯಲಾಯಿತು.
ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಆರ್.ಸಿದ್ದಪ್ಪ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ಉದ್ಘೋಷಗಳನ್ನು ಕೂಗುತ್ತಾ, ದೇವಾಲಯದ ಪ್ರಾಂಗಣದ ಸುತ್ತ ರಥವನ್ನು ಪ್ರದಕ್ಷಿಣೆ ಹಾಕಿಸಿದರು. ರಥೋತ್ಸವಕ್ಕೆ ತಾಲೂಕಿನ ವಿವಿಧೆಡೆಯಿಂದ ಭಕ್ತ ಸಮೂಹ ಆಗಮಿಸಿ, ದೇವರ ದರ್ಶನ ಪಡೆದರು. ಅರ್ಚಕರಾದ ಎನ್.ಜಯರಾಂ, ರಾಜಸ್ವ ನಿರೀಕ್ಷಕ ರವಿ, ಸೇವಾರ್ಥದಾರರಾದ ಎಸ್. ಗೋವಿಂದರಾಜು, ಜಿ.ರಮೇಶ್, ವಸಂತ್ ಇದ್ದರು.