ಚಾಮರಾಜನಗರ: ತಮಿಳುನಾಡಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮತ್ತೆ ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಮಾಡಬೇಕು ಹಾಗೂ ತಾಳವಾಡಿಯಲ್ಲಿ ಬಂಧಿಸಿರುವ ಕನ್ನಡಿಗರ ಬಿಡುಗಡೆಗೆ ಉಭಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವತಿಯಿಂದ ಗುರುವಾರ ಕರೆ ನೀಡಿದ್ದ ಚಾಮರಾಜನಗರ ಬಂದ್ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.
ಬಂದ್ ಹಿನ್ನೆಲೆಯಲ್ಲಿ ಗುರುವಾರ ನಗರದ ಉದ್ಯಮಿಗಳು, ವರ್ತಕರು, ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಬೆಂಬಲ ಸೂಚಿಸಿದರು. ಆಟೋ, ಬಸ್, ಹೊಟೇಲ್, ಪೆಟ್ರೋಲ್ ಬಂಕ್, ಲಾರಿ ಮಾಲೀಕರು ಸಹ ಸ್ವಯಂ ಪ್ರೇರಣೆಯಿಂದ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದರು. ಚಿತ್ರಮಂದಿರಗಳು ದಿನದ 4 ಪ್ರದರ್ಶನಗಳನ್ನು ರದ್ದು ಮಾಡಿದ್ದವು.
ನಗರದ ಅತಿ ದೊಡ್ಡ ಜನಸಂದಣಿ ಪ್ರದೇಶಗಳಾದ ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ರಥದ ಬೀದಿ, ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಬಸ್ಗಳ ಸಂಚಾರ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಶಾಲಾ ಕಾಲೇಜುಗಳಿಗೆ ಮುಂಚಿತವಾಗಿ ರಜೆ ಘೋಷಿಸಲಾಗಿತ್ತು.
ಆಟೋಗಳಲ್ಲಿ ತೆರಳಿದರು: ಕೆಲ ಖಾಸಗಿ ಬಸ್ಗಳು ತಾವು ತಂಗಿದ್ದ ಸ್ಥಳದಿಂದ ನಗರಕ್ಕೆ ಬಂದವು. ಆದರೆ ಬಂದ್ ಪ್ರಯುಕ್ತ ಅವು ಹೋಗಬೇಕಾದ ಸ್ಥಳಕ್ಕೆ ಹೋಗಲಿಲ್ಲ. ಅಕಸ್ಮಾತ್ ಆಗಿ ಬಂದ ಪ್ರಯಾಣಿಕರು, ಗೂಡ್ಸ್ ಆಟೋಗಳಲ್ಲಿ ತೆರಳುತ್ತಿದ್ದದ್ದು ಅಲ್ಲಲ್ಲಿ ಕಂಡು ಬಂತು.
ನಗರದ ತಾಲೂಕು ಕಚೇರಿ ಹಾಗೂ ಜಿಲ್ಲಾಡಳಿತ ಭವನದಲ್ಲಿ ಸದಾ ಜನಜಂಗುಳಿ ಇರುತ್ತಿತ್ತು. ಆದರೆ ಗುರುವಾರ ಸಾರ್ವಜನಿಕರ ಸುಳಿವಿರಲಿಲ್ಲ. ಸಿಬ್ಬಂದಿ ಸಂಖ್ಯೆಯೂ ವಿರಳವಾಗಿತ್ತು.
ಟೈರ್ಗೆ ಬೆಂಕಿ: ಬಂದ್ ಅಂಗವಾಗಿ ಕನ್ನಡ ಪರ ಕಾರ್ಯಕರ್ತರು ಗುರುವಾರ ಬೆಳಗ್ಗೆ 7 ಗಂಟೆ ಸಮಯದಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ನಗರದ ವಿವಿಧೆಡೆ ಟೈರ್ಗಳಿಗೆ ಬೆಂಕಿ ಹಚ್ಚುವ ಮೂಲಕ ಬಂದ್ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು. ಕೇಂದ್ರ ಸರ್ಕಾರಿ ಕಚೇರಿಗಳಾದ ಬಿಎಸ್ಎನ್ಎಲ್, ಅಂಚೆ ಕಚೇರಿಗೆ ತೆರಳಿದ ಕಾರ್ಯಕರ್ತರು ಬಾಗಿಲು ಹಾಕಿಸಿದರು.
ರೈಲಿಗೆ ಮುಗಿಬಿದ್ದ ಜನ..
ಚಾಮರಾಜನಗರ: ನಗರ ಬಂದ್ ಹಿನ್ನೆಲೆಯಲ್ಲಿ ಗುರುವಾರ ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ಗಳ ಸಂಚಾರ ನಿಷೇಧಿಸಿದ್ದ ಹಿನ್ನೆಲೆಯಲ್ಲಿ ರೈಲಿಗೆ ಜನವೋ ಜನ... ಗೂಡ್ಸ್ ಆಟೋಗಳಿಗಂತೂ ಫುಲ್ ಡಿಮ್ಯಾಂಡ್. ಗುರುವಾರ ನಗರದಲ್ಲಿ ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ ಸಂಚಾರವಿರದ ಪರಿಣಾಮ ಚಾಮರಾಜನಗರದಿಂದ ನಂಜನಗೂಡು ಮತ್ತು ಮೈಸೂರಿಗೆ ಹೋಗುವ ರೈಲುಗಳು ಭರ್ತಿಯಾಗಿದ್ದವು. ಅಲ್ಲದೇ ಮೈಸೂರು ಕಡೆಯಿಂದಲೂ ಬಸ್ ಇಲ್ಲದ ಪರಿಣಾಮ ರೈಲುಗಳು ಭರ್ತಿಯಾಗಿದ್ದವು. ಹಳ್ಳಿಗಳಿಂದ ನಗರಕ್ಕೆ ಬಂದಿದ್ದ ಜನ ಮತ್ತು ಇತರೆ ಕೆಲಸ ಕಾರ್ಯಕ್ರಮಗಳ ಮೇಲೆ ಬೇರೆ ಬೇರೆ ಹಳ್ಳಿಗಳಿಗೆ ಹೋಗಬೇಕಾದ ಜನ ಗೂಡ್ಸ್ ಆಟೋಗಳ ಮೊರೆ ಹೋದರು. ಕೆಲ ಖಾಸಗಿ ಬಸ್ಗಳು ಕದ್ದು ಮುಚ್ಚಿ ಪ್ರಯಾಣಿಕರನ್ನು ನಗರಕ್ಕೆ ತಂದು ಬಿಟ್ಟವು.