ಮೈಸೂರು: ಜಿಲ್ಲಾಡಳಿತ ಆಯೋಜಿಸಿದ್ದ 64ನೇ ಗಣರಾಜ್ಯೋತ್ಸವ ದಿನಾಚರಣೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶನಿವಾರ ಸಂಭ್ರಮದಿಂದ ಜರುಗಿತು. ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ತೆರೆದ ಜೀಪಿನಲ್ಲಿ ಪಥಸಂಚಲನ ವೀಕ್ಷಿಸಿದರು.
ನಂತರ ಆರಂಭವಾದ ಶಿಸ್ತುಬದ್ಧ ಪಥಸಂಚಲನದಲ್ಲಿ ಕೆಎಸ್ಆರ್ಪಿ, ಸಿಎಆರ್, ಡಿಎಆರ್, ನಗರ ಸಂಚಾರ ಪೊಲೀಸರು, ಗೃಹರಕ್ಷಕ ದಳ, ಮಹಿಳಾ ಪೊಲೀಸರು, ಆರ್ಪಿಎಫ್, ಕೆಪಿಎನಲ್ಲಿ ತರಬೇತಿ ಪಡೆಯುತ್ತಿರುವ ಡಿವೈಎಸ್ಪಿಗಳ ತಂಡ, ಅಗ್ನಿಶಾಮಕ ದಳ ಮತ್ತು ತುರ್ತು ಸೇವೆ, ಕರ್ನಾಟಕ ಭದ್ರತಾ ಸೇವಾ ಸಂಘ (ಕೆಎಸ್ಎಸ್ಎ), ಎನ್ಸಿಸಿ ಭೂಸೇನೆ ಮತ್ತು ನೌಕದಳ, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತೀಯ ಸೇವಾದಳ, ಅಶ್ವರೋಹಿದಳದವರು ಪಾಲ್ಗೊಂಡಿದ್ದರು. ಈ ಪಥಸಂಚಲನಕ್ಕೆ ಕೆಎಸ್ಆರ್ಪಿ, ಸಿಎಆರ್, ಡಿಎಆರ್ ಬ್ಯಾಂಡ್ನವರು ಸಾಥ್ ನೀಡಿದರು.
ಗಣರಾಜ್ಯೋತ್ಸವ ಸಂದೇಶ ನೀಡಿದ ಸಚಿವ ರಾಮದಾಸ್, 1950ರ ಜ.26 ರಂದು ಭಾರತ ದೇಶವು ಸಂವಿಧಾನವನ್ನು ರಚಿಸಿಕೊಂಡು, ಈ ಮೂಲಕ ಪ್ರಜೆಗಳಿಗೆ ಸಮಾನವಾದ ಅವಕಾಶಗಳನ್ನು ನೀಡಬೇಕೆಂಬ ಆಶಯವನ್ನು ಒಳಗೊಂಡಿದೆ. 1947ರ ಆ.15 ರಂದು ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಪರಕೀಯರ ಸಂವಿಧಾನದ ಅಡಿಯಲ್ಲಿ ರಾಷ್ಟ್ರವು ಮುನ್ನಡೆಯುತ್ತಿತ್ತು. ಸಾರ್ವಭೌಮ ರಾಷ್ಟ್ರಕ್ಕೆ ತನ್ನದೇ ಆದ ಸಂವಿಧಾನ ಅವಶ್ಯಕತೆ ಇತ್ತು ಎಂದರು.
ಯುವಕರ ಪಾತ್ರ ಮುಖ್ಯ: ಪ್ರಸ್ತುತ ಯುವಕರ ಪಾತ್ರ ಪ್ರಮುಖವಾಗಿದೆ. ಹೆಚ್ಚಿನ ವಿದ್ಯಾವಂತರು, ಯುವಕರು ಭಾರತದ ರಕ್ಷಣೆಗಾಗಿ ಪಣತೊಡಬೇಕಾಗಿದೆ. ಮಹಿಳೆಯರನ್ನು ಗೌರವದಿಂದ ಕಾಣುವ, ರಾಷ್ಟ್ರದ ಸಂಸ್ಕೃತಿಯನ್ನು ಗೌರವಿಸುವ, ರಾಷ್ಟ್ರಕ್ಕಾಗಿ ತನುಮನಗಳನ್ನು ಅರ್ಪಿಸಿಕೊಳ್ಳುವ ಅಸಂಖ್ಯಾತ ಯುವಕರು ಇಂದು ಭಾರತಕ್ಕೆ ಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಒಳಗಿನ ಶತ್ರುಗಳನ್ನು ಧಮನ ಮಾಡಿದರೆ, ಹೊರಗಿನ ಶತ್ರುಗಳ ಧಮನ ಸುಲಭ. ಈ ನಿಟ್ಟಿನಲ್ಲಿ ಭಾರತದ ಪ್ರಜೆಗಳು ಮೊದಲಿಗೆ ಸ್ಥಿರ ಸರ್ಕಾರವನ್ನು ನೀಡಬೇಕು. ಸ್ಥಿರ ಸರ್ಕಾರದ ಮೂಲಕ ಪ್ರಜಾಪ್ರಭುತ್ವದ ಎಲ್ಲಾ ಆಶಯಗನ್ನು ನೆರವೇರಿಸಬಹುದು. ಆಂತರಿಕ ಮತ್ತು ಬಾಹ್ಯ ಶತ್ರುಗಳನ್ನು ಮಟ್ಟ ಹಾಕಬಹುದು ಎಂದು ಅವರು ತಿಳಿಸಿದರು.
ನಮ್ಮನ್ನೇ ಭಯೋತ್ಪಾದಕರೆಂದರೆ ಹೇಗೆ?: ದೇಶವು ಈಗ ಆತಂಕಕಾರಿ ಪರಿಸ್ಥಿತಿ ಎದುರಿಸುತ್ತಿದೆ. ನಮ್ಮಲ್ಲಿಯ ಕೆಲವರು ನಮ್ಮನ್ನೇ ಭಯೋತ್ಪಾದಕರು ಎಂದು ಕರೆಯುತ್ತಿದ್ದಾರೆ. ವೋಟ್ಬ್ಯಾಂಕಿಗಾಗಿ ಇಂತಹ ಕೀಳುಮಟ್ಟದ ಆರೋಪ ಮಾಡುತ್ತಿರುವುದು ಸರಿಯಲ್ಲ. ಬಾಂಗ್ಲಾದೇಶದ ಅನಧಿಕೃತ ಅನಧಿಕೃತ ನುಸುಳುಗಾರರು ದೇಶದ ಎಲ್ಲೆಡೆ ಸೇರಿ ಆಂತರಿಕ ಭದ್ರತೆಗೆ ಧಕ್ಕೆ ತರುತ್ತಿದ್ದಾರೆ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ಕೃತ್ಯಗಳು ಗಡಿಯಲ್ಲಿ ಉದ್ವಿಗ್ನತೆ ವಾತಾವರಣ ನಿರ್ಮಿಸುತ್ತಿದೆ. ಅಮೆರಿಕಾದ ನೆರವಿನಿಂದ ಶ್ರೀಲಂಕಾವು ಸಮುದ್ರಯಾನ ಮೂಲಕ ಭಾರತದ ಮೇಲೆ ಆಕ್ರಮಣ ಮಾಡಲು ಹೊರಟಿದೆ. ಚೀನಾದಿಂದ ನಮ್ಮ ದೇಶದ ಗಡಿಯ ಆಕ್ರಮಣ ನಡೆಯುತ್ತಿದೆ. ಇವೆಲ್ಲವೂ ದೇಶದ ಕಳವಳಕಾರಿ ಪರಿಸ್ಥಿತಿಯನ್ನು ಹೆಚ್ಚುವಂತೆ ಮಾಡುತ್ತಿದೆ ಎಂದು ಅವರು ಹೇಳಿದರು.
ಈ ನಡುವೆ ಭಾರತದ ಸಂಸ್ಕೃತಿಯ ಮೇಲೆ ನಡೆಯುತ್ತಿರುವ ಅವ್ಯಾಹತ ಪ್ರಾಯೋಜಿತ ದಾಳಿಗಳು, ಭಾರತದ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳು, ಭಾರತದಿಂದ ಫಲಾಯನ ಮಾಡುತ್ತಿರುವ ಬುದ್ಧಿವಂತರು, ನಮ್ಮ ದೇಶವನ್ನೇ ಬೈಯುತ್ತಾ ಸ್ವಾರ್ಥ ಸಾಧಿಸಿಕೊಳ್ಳುತ್ತಿರುವ ಬುದ್ಧಿಜೀವಿಗಳು, ಇವೆಲ್ಲದರಿಂದ ಭಾರತ ದೇಶವು ಹೊರಬರಬೇಕಾಗಿದೆ ಎಂದು ಅವರು ತಿಳಿಸಿದರು.
ಬಹುಮಾನ ವಿತರಣೆ: ಇದೇ ವೇಳೆ ಪಥಸಂಚಲನದಲ್ಲಿ ಭಾಗವಹಿಸಿದ್ದ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಸಶಸ್ತ್ರಪಡೆ ವಿಭಾಗ- ನಗರ ಸಂಚಾರ ಪೊಲೀಸ್ (ಪ್ರಥಮ), ಕೆಪಿಎ ಪತ್ರಾಂಕಿತ ಸೇವೆ ಡಿವೈಎಸ್ಪಿಗಳ ತಂಡ (ದ್ವಿತೀಯ) ಮತ್ತು ಕೆಎಸ್ಆರ್ಪಿ 5ನೇ ಪಡೆ (ತೃತೀಯ). ಸಶಸ್ತ್ರರಹಿತ ವಿಭಾಗ- ಅಶ್ವಾರೋಹಿದಳ (ಪ್ರಥಮ), ಕೆಪಿಎ ಪತ್ರಾಂಕಿತ ಡಿವೈಎಸ್ಪಿ ತಂಡ (ದ್ವಿತೀಯ), ಅಗ್ನಿ ಶಾಮಕ ಮತ್ತು ತುರ್ತು ಸೇವೆ (ತೃತೀಯ). ಶಾಲಾ ವಿಭಾಗ- ಭಾರತ ಸೇವಾದಳ (ಪ್ರಥಮ), ಎನ್ಸಿಸಿ ಭೂಸೇನೆ (ದ್ವಿತೀಯ) ಮತ್ತು ಎನ್ಸಿಸಿ ನೌಕದಳ (ತೃತೀಯ).
ಮಾಜಿ ಆಟಗಾರನಿಗೆ ಗೌರವ: ಫುಟ್ಬಾಲ್ ಭಾರತ ತಂಡದ ಮಾಜಿ ಆಟಗಾರ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು ಎನ್.ಪಾಪಣ್ಣ ಅವರಿಗೆ ಯುವಜನ ಮತ್ತು ಕ್ರೀಡಾ ಇಲಾಖೆ ವತಿಯಿಂದ 50 ಸಾವಿರ ಸಹಾಯಧನ ನೀಡಿ ಗೌರವಿಸಲಾಯಿತು.
ಸಾಂಸ್ಕೃತಿಕ ರಂಗು: ನಂತರ ಟೆರಿಷಿಯನ್ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಏರೋಬಿಕ್ಸ್ ವ್ಯಾಯಾಮ ಪ್ರದರ್ಶನ, ಬೆಡನ್ ಪೊವೆಲ್ ಪಬ್ಲಿಕ್ ಪ್ರೌಢಶಾಲೆ ವಿದ್ಯಾರ್ಥಿಗಳು “ಜೈ ಹೋ...’ ಹಾಡಿಗೆ ನೃತ್ಯ ಹಾಗೂ ಬಂಟ್ವಾಳ್ ಮಾಧವ ಶೆಣೈ ಪ್ರೌಢಶಾಲೆಯ ವಿದ್ಯಾರ್ಥಿಗಳು ಡಂಬಲ್ಸ್, ಹೂಪ್ಸ್, ವ್ಯಾಂಡ್ಸ್ ವ್ಯಾಯಾಮ ಪ್ರದರ್ಶನ ಮತ್ತು ಸೆಲ್ಯೂಟ್ ಮಾರ್ಚಿಂಗ್ ಕಾರ್ಯಕ್ರಮ ಪ್ರಸ್ತುತಪಡಿಸಿದರು.
ಶಾಸಕ ತನ್ವೀರ್ ಸೇಠ್, ಮೇಯರ್ ಎಂ.ಸಿ. ರಾಜೇಶ್ವರಿ ಪುಟ್ಟಸ್ವಾಮಿ, ಉಪ ಮೇಯರ್ ಮಹದೇವಪ್ಪ, ಜಿಪಂ ಅಧ್ಯಕ್ಷ ಕಾ.ಪು. ಸಿದ್ದವೀರಪ್ಪ, ಎಂಡಿಎ ಅಧ್ಯಕ್ಷ ಎಲ್. ನಾಗೇಂದ್ರ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಇ. ಮಾರುತಿರಾವ್ ಪವಾರ್, ವಸು ್ತಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಎಸ್.ಡಿ. ಮಹೇಂದ್ರ, ಪ್ರಭಾರ ಜಿಲ್ಲಾಧಿಕಾರಿ ಡಾ. ಅಜಯ್ ನಾಗಭೂಷಣ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಅಮಿತಾ ಪ್ರಸಾದ್, ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ, ಪ್ರಾಚ್ಯವಸ್ತು ಇಲಾಖೆ ಆಯುಕ್ತ ಪಿ.ಎಸ್. ವಸ್ತ್ರದ್, ದಕ್ಷಿಣ ವಲಯ ಐಜಿಪಿ ಡಾ. ರಾಮಚಂದ್ರರಾವ್, ಕೆಪಿಎ ನಿರ್ದೇಶಕ ಎ.ಎಸ್.ಎನ್. ಮೂರ್ತಿ, ಪಾಲಿಕೆ ಆಯುಕ್ತ ಡಾ.ಎಂ.ಆರ್. ರವಿ, ಎಂಡಿಎ ಆಯುಕ್ತ ಡಾ.ಸಿ.ಜಿ. ಬೆಟ್ಸೂರಮಠ, ಪೊಲೀಸ್ ಆಯುಕ್ತ ಕೆ.ಎಲ್. ಸುಧೀರ್, ಎಸ್ಪಿ ಆರ್. ದಿಲೀಪ್, ಡಿಸಿಪಿಗಳಾದ ಬಸವರಾಜ ವೈ. ಮಾಲಗತ್ತಿ, ಕೆ.ಪಿ. ಭೀಮಯ್ಯ ಮೊದಲಾದವರು ಇದ್ದರು.
ಸಹಬಾಳ್ವೆ ಪ್ರಜಾಪ್ರಭುತ್ವದ ಆಶಯ
ಮೈಸೂರು: ಎಲ್ಲರಿಗೂ ಶಾಂತಿ, ಸಮಾನತೆ ಹಾಗೂ ಸಹಬಾಳ್ವೆ ಕಲಿಸುವುದು ಪ್ರಜಾಪ್ರಭುತ್ವದ ಆಶಯ ಎಂದು ಹೈಕೋರ್ಟ್ ವಕೀಲ ಎಲ್. ಗೋವಿಂದರಾಜ್ ಹೇಳಿದರು. ಶಾರದಾ ವಿಲಾಸ ವಿದ್ಯಾಸಂಸ್ಥೆ ಶನಿವಾರ ಏರ್ಪಡಿಸಿದ್ದ 64ನೇ ಗಣರಾಜ್ಯೋತ್ಸವದಲ್ಲಿ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ ವಕೀಲ ಎಲ್. ಗೋವಿಂದರಾಜ್ ಅವರನ್ನು ಸನ್ಮಾನಿಸಲಾಯಿತು. ಗೌರವ ಕಾರ್ಯದರ್ಶಿ ಎಸ್.ರವಿಶಂಕರ್, ಉತ್ಸವ ಸಮಿತಿ ಸಂಚಾಲಕ ಎಸ್.ಶಿವ, ಸದಸ್ಯರಾದ ಡಿ.ಎಸ್. ಶ್ರೀನಿವಾಸರಾವ್, ಎಸ್.ನಾಗರಾಜ್, ಸುಂದರ್ಮೂರ್ತಿ, ಎಚ್.ಕೆ.ಶ್ರೀನಾಥ್ ಹಾಗೂ ಶೀಫಾ ಆಸ್ಪ್ರತ್ರೆ ಮುಖ್ಯಸ್ಥ ಡಾ.ಎಚ್.ಎಂ. ಸಮ್ಮೀವುಲ್ಲಾ ಇದ್ದರು. ರಾಷ್ಟ್ರ ಹಾಗೂ ರಾಜ್ಯ ಮಟ್ಟದ ವಿವಿಧ ಕ್ರೀಡೆಗಳಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪ್ರಾಂಶುಪಾಲ ಡಾ. ಹನುಮಂತಚಾರ್ ಜೋಷಿ ಸ್ವಾಗತಿಸಿದರು. ಮುಖ್ಯೋಪಧ್ಯಾಯ ಶ್ರೀಪಾದಭಟ್ ವಂದಿಸಿದರು.
ಭಾರತ ಜಾತ್ಯತೀತ ಸಂವಿಧಾನ ರಾಷ್ಟ್ರ
ಇಡೀ ಪ್ರಪಂಚದಲ್ಲಿ ಜಾತ್ಯತೀತ ಸಂವಿಧಾನ ಹೊಂದಿರುವ ಏಕೈಕ ರಾಷ್ಟ್ರ ಭಾರತ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ. ಎಸ್.ಮಲ್ಲಣ್ಣ ಹೇಳಿದರು. ರಾಮಕೃಷ್ಣನಗರದ ರಾಮಕೃಷ್ಣ ವಿದ್ಯಾಕೇಂದ್ರದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬ ಪ್ರಜೆಯ ಸರ್ವ ಸ್ವತಂತ್ರದ ಪರಿಕಲ್ಪನೆ ನನಸಾಗಿಸಿಕೊಟ್ಟ ಮಹಾನ್ ನೇತಾರ ಡಾ. ಅಂಬೇಡ್ಕರ್. ಬೆನಗಲ್ ನರಸಿಂಹರಾವ್, ಸರ್ ಎಂ.ವಿಶ್ವೇಶ್ವರಯ್ಯ ಹಾಗೂ ಡಾ. ಅಬ್ದುಲ್ ಕಲಾಂ ಮತ್ತಿತರ ಮಹನೀಯರ ಶಿಸ್ತು, ಪ್ರಾಮಾಣಿಕತೆ ಹಾಗೂ ದಕ್ಷತೆ ಸ್ಮರಣೀಯ ಎಂದರು. ಸಂಘದ ಅಧ್ಯಕ್ಷ ಎಂ. ಪಾಪೇಗೌಡ, ಆಡಳಿತಾಧಿಕಾರಿ ಪ್ರೊ. ಕೆ.ಪಿ. ಮಹಾದೇವಪ್ಪ ಇದ್ದರು. ಮುಖ್ಯೋಪಧ್ಯಾಯ ಜಿ.ಎನ್. ವಿಶ್ವನಾಥ್ ಸ್ವಾಗತಿಸಿದರು. ಎಲ್.ಎನ್. ಭಾರತಿ ವಂದಿಸಿದರು.
ಸಂವಿಧಾನ ಆಶಯ ಈಡೇರಿಲ್ಲ
ಬಡತನ, ಜಾತೀಯತೆ, ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ ಅತ್ಯಾಚಾರ ನೋಡಿದರೆ ಸಂವಿಧಾನದ ಆಶಯ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸರ್ವ ಜನಾಂಗ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವೇಣುಗೋಪಾಲ್ ಆರೋಪಿಸಿದರು. ನಜರಬಾದ್ನ ವೇದಿಕೆ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪದಾಧಿಕಾರಿಗಳಾದ ಎಲ್.ಮಹದೇವಪ್ಪ, ಲಕ್ಷ್ಮಣ್ರಾಜ್, ಜೆ.ಜಯರಾಜ್, ಕೆ.ವಜ್ರಗೌಡ, ಎಂ.ಜೆ. ಅರಸ್, ಸಿ.ಪಿ. ತಮ್ಮಣ್ಣ, ಪುಟ್ಟಯ್ಯ, ಎಂ.ಪ್ರಭುದೇವ್, ತೇಜಾಮಣಿ, ಚಿಕ್ಕತಾಯಮ್ಮ, ಖುರ್ಷಿದ್ಬೇಗಂ ಇದ್ದರು.
'ಯುವಜನತೆ ಜವಾಬ್ದಾರಿ ವಹಿಸಲಿ'
ಸಂವಿಧಾನದ ಆಶಯ ಉಳಿಸುವಲ್ಲಿ ಯುವಜನತೆ ಜವಾಬ್ದಾರಿ ವಹಿಸಬೇಕು ಎಂದು ಹಿರಿಯ ಪತ್ರಕರ್ತ ಕೃಷ್ಣ ವಟ್ಟಂ ಹೇಳಿದರು. ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ನಮ್ಮ ಜವಾಬ್ದಾರಿಗಳನ್ನು ಅರಿತು ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಇಂದಿನ ಪರಿಸ್ಥಿತಿಯಲ್ಲಿ ಭಾರತದಲ್ಲಿ ಯುವಜನತೆಯೊಂದೇ ಆಶಾಕಿರಣ ಎಂದರು. ಪ್ರಾಂಶುಪಾಲ ಪ್ರೊ. ಬಿ.ವಿ. ಸಾಂಬಶಿವಯ್ಯ ಧ್ವಜಾರೋಹಣ ನೆರವೇರಿಸಿದರು. ಪಿಯು ಕಾಲೇಜಿನ ಪ್ರಾಂಶುಪಾಲ ಎಸ್.ಸೋಮಶೇಖರ್, ಜೆಎಸ್ಎಸ್ ವಾಕ್ ಶ್ರವಣ ಸಂಸ್ಥೆ ನಿರ್ದೇಶಕ ಡಾ. ಎಂ.ಎಸ್. ನಟರಾಜ್ ಇದ್ದರು. ಸಹ ಪ್ರಾಧ್ಯಾಪಕ ನಾಗೇಂದ್ರಕುಮಾರ್ ಸ್ವಾಗತಿಸಿದರು. ಪ್ರೊ. ಕೆ.ರಾಮಮೂರ್ತಿ ನಿರೂಪಿಸಿದರು. ಎಂ.ಪಿ. ಸೋಮಶೇಖರ್ ವಂದಿಸಿದರು.
3 ದಿನ ರಜೆ: ಸರ್ಕಾರಿ ನೌಕರರು ನಾಪತ್ತೆ
ಮೈಸೂರು: ಶುಕ್ರವಾರ ಈದ್ ಮಿಲಾದ್ ರಜೆ, ಶನಿವಾರ ಗಣರಾಜ್ಯೋತ್ಸವ ರಜೆ, ಭಾನುವಾರ ವಾರದ ರಜೆ. ಸತತ ಮೂರು ದಿನಗಳ ಸಿಕ್ಕಿದ್ದರಿಂದ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ರಜೆಯ ಮಜಾ ಸವಿಯಲು ತೆರಳಿದ್ದರು. ಹೀಗಾಗಿ, ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಗಣರಾಜ್ಯೋತ್ಸವದಲ್ಲಿ ಪ್ರೇಕ್ಷಕರ ಸಂಖ್ಯೆಯೂ ಗಣನೀಯವಾಗಿ ಇಳಿಕೆ ಆಗಿತ್ತು.
ಹೌದು, 64ನೇ ಗಣರಾಜ್ಯೋತ್ಸವದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಕಡಿಮೆ ಸಂಖ್ಯೆಯಲ್ಲಿ ನೆರೆದಿದ್ದರು. ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಿರೀಕ್ಷಿತ ಮಟ್ಟದಲ್ಲಿ ಸೇರಿರಲಿಲ್ಲ.
ಸರ್ಕಾರಿ ನೌಕರರಿಗಾಗಿ ಮೀಸಲಿಟ್ಟಿದ್ದ ಕುರ್ಚಿಗಳು ಖಾಲಿಯಾಗಿದ್ದವು. ಪಥಸಂಚಲನದಲ್ಲಿ ಭಾಗವಹಿಸಲು ಬಂದಿದ್ದ ಶಾಲಾ ಮಕ್ಕಳ ಪೋಷಕರು, ಶಿಕ್ಷಕರು ಅಷ್ಟು ಮಂದಿ ಮೈದಾನದಲ್ಲಿ ನೆರೆದಿದ್ದರು. ಇನ್ನೂ ಪಥಸಂಚಲನದಲ್ಲಿ ಭಾಗವಹಿಸಲು ಹಾಗೂ ಭದ್ರತೆಗಾಗಿ ನಿಯೋಜಿಸಿದ್ದ ನೂರಾರು ಮಂದಿ ಪೊಲೀಸರು ಇದ್ದರು. ಉಳಿದಂತೆ ಮೈದಾನದ ಪ್ರೇಕ್ಷಕರ ಗ್ಯಾಲರಿ, ಸಾರ್ವಜನಿಕರ ಗ್ಯಾಲರಿ ಖಾಲಿ ಖಾಲಿ ಆಗಿತ್ತು.