ಮೈಸೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ಸೇರಿದಂತೆ ಐವರನ್ನು ಮೈಸೂರಿನ 3ನೇ ಜೆಎಂಎಫ್ಸಿ ನ್ಯಾಯಾಧೀಶೆ ದಮಯಂತಿ ಅವರು ಗುರುವಾರ ಖುಲಾಸೆಗೊಳಿಸಿದರು.
ಸಚಿವ ರಾಮದಾಸ್, ಪಾಲಿಕೆ ಸದಸ್ಯರಾದ ಮ.ವಿ. ರಾಮಪ್ರಸಾದ್, ಎಂ.ಡಿ. ಪಾರ್ಥಸಾರಧಿ, ಮುರಳೀಧರ ಜೆಟ್ಟಿ ಹಾಗೂ ಶಿವಕುಮಾರ್ ಅವರು 2008ರ ವಿಧಾನಸಭಾ ಚುನಾವಣಾ ಕಾಲಕ್ಕೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದರು ಎಂದು ಸೆಕ್ಟರ್ ಮ್ಯಾಜಿಸ್ಟ್ರೇಟ್ ಆಗಿದ್ದ ಪ್ರಭಾಕರ್ ಅವರು ನೀಡಿದ ದೂರಿನ ಮೇರೆಗೆ ಕೆ.ಆರ್. ಠಾಣಾ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು.
ರಾಮದಾಸ್ ಅವರು ನಾಮಪತ್ರ ಸಲ್ಲಿಕೆಗೆ ಚಾಮುಂಡಿಪುರಂನಿಂದ ಮೆರವಣಿಗೆಯಲ್ಲಿ ಹೊರಟಾಗ 120 ಕ್ಕಿಂತ ಹೆಚ್ಚು ಮಂದಿ ಇರಬಾರದು ಎಂದು ಚುನಾವಣಾ ಅಧಿಕಾರಿಗಳು ಸೂಚಿಸಿದ್ದರು. ಆದರೆ, ಮೆರವಣಿಗೆಯಲ್ಲಿ ಸಹಸ್ರಾರು ಮಂದಿ ಭಾಗವಹಿಸಿ, ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ರಾಮದಾಸ್ ಪರ ನಾಗರಾಜ್, ರಾಮಪ್ರಸಾದ್, ಜೆಟ್ಟಿ ಹಾಗೂ ಶಿವಕುಮಾರ್ ಪರ ಪಿ.ಜೆ. ರಾಘವೇಂದ್ರ, ಪಾರ್ಥಸಾರಥಿ ಪರ ಅ.ಮ. ಭಾಸ್ಕರ್ ವಕಾಲತ್ತು ವಹಿಸಿದ್ದರು.
ಈ ಪ್ರಕರಣದಲ್ಲಿ ರಾಮದಾಸ್ ಅವರ ವಿರುದ್ಧ ಎರಡು ಬಾರಿ ಜಾಮೀನುರಹಿತ ಬಂಧನದ ವಾರೆಂಟ್ ಹೊರಡಿಸಲಾಗಿತ್ತು. ನ್ಯಾಯಾಲಯ ಎರಡು ಬಾರಿ ತಲಾ 100 ದಂಡ ವಿಧಿಸಿತ್ತು.