ಚಾಮರಾಜನಗರ: ಚಾಮರಾಜನಗರ ಜಿಲ್ಲೆಯನ್ನು ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಎಲ್ಲರು ಶ್ರಮಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಶನಿವಾರ ರಾಜೀವ್ಗಾಂಧಿ ಪಂಚಾಯತ್ ಸಶಕ್ತೀಕರಣ ಅಭಿಯಾನ ಯೋಜನೆಯ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರ ಕಟ್ಟಡ ಶಂಕುಸ್ಥಾಪನಾ ಸಮಾರಂಭ ಹಾಗೂ ನವೀಕೃತ ಕೆಡಿಪಿ ಸಭಾಂಗಣ ಉದ್ಘಾಟಿಸಿ ಅವರು ಮಾತನಾಡಿದರು.
ಚಾಮರಾಜನಗರವನ್ನು ಹೊರಗಿನ ಜನರು ನೋಡುವ ದೃಷ್ಟಿಕೋನ ಬದಲಿಸುವ ನಿಟ್ಟಿನಲ್ಲಿ ನಾವು ಯಾವುದೇ ಕೆಲಸ ಕಾರ್ಯ ಮಾಡಿದರೂ ಇತರೆ ಜಿಲ್ಲೆಗಳಿಗಿಂತ ಒಂದು ಹೆಜ್ಜೆ ಮುಂದಾಗಿ ಮಾಡುವುದನ್ನು ಬೆಳಸಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಕಳೆದ 4 ವರ್ಷಗಳ ಹಿಂದೆಯೇ ನಿರ್ಮಾಣ ಮಾಡಲಾದ ಜಿಪಂ ಕೆಡಿಪಿ ಸಭಾಂಗಣಕ್ಕೆ ಹೈಟೈಕ್ ಸ್ಪರ್ಶ ನೀಡಿ ಮಾದರಿ ಸಭಾಂಗಣ ನಿರ್ಮಾಣ ಮಾಡಲಾಗಿದೆ.
ಈ ಸಭಾಂಗಣದಲ್ಲಿ ಉಪಯುಕ್ತ ಚರ್ಚೆಗಳು ನಡೆದು ಜಿಲ್ಲಾಭಿವೃದ್ಧಿಗೆ ಪೂರಕವಾದ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆಯ ಅಭಿವೃದ್ಧಿ ನಿಟ್ಟಿನಲ್ಲಿ ಪ್ರತಿಯೊಬ್ಬ ಸದಸ್ಯರು ಮುಂದಾಗಬೇಕು ಎಂದು ಸಲಹೆ ನೀಡಿದರು. ಈಗಾಗಲೇ ಅಭಿವೃದ್ಧಿಗೆ ದಾಪುಗಾಲು ಹಾಕುವ ನಿಟ್ಟಿನಲ್ಲಿ ಎಲ್ಲರು ಒಟ್ಟಾಗಿ ಸಾಗುತ್ತಿದ್ದೇವೆ.
ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾಧಿಸಿ ತೋರಿಸಿದ್ದೇವೆ ಎಂದರು. ಗ್ರಾಪಂಗಳಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪನೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವ್ಯಾಪ್ತಿಗೆ ಜಿಲ್ಲೆಯನ್ನು ಸೇರಿಸಲಾಗಿದ್ದು, ಈಗಾಗಲೇ ಚಾಮರಾಜನಗರ ಮತ್ತು ಗುಂಡ್ಲುಪೇಟೆಯ 297 ಗ್ರಾಮಗಳ ಕುಡಿಯುವ ನೀರಿನ ಯೋಜನೆಗೆ ಚಾಲನೆ ಸಿಕ್ಕಿದ್ದು, ಇದರ ವ್ಯಾಪ್ತಿಗೆ ಕೊಳ್ಳೇಗಾಲ ಮತ್ತು ಯಳಂದೂರು ತಾಲೂಕನ್ನು ಸಹ ಸೇರಿಸಲಾಗುವುದು.
ಅಂತರ್ಜಲ ಕುಸಿತದಿಂದಾಗಿ ಬೋರ್ವೆಲ್ಗಳಲ್ಲಿ ಪ್ಲೋರೈಡ್ ಮತ್ತು ಕಲುಷಿತ ನೀರು ಬರುತ್ತಿದ್ದು, ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದ ತಲಾ 4-5 ಗ್ರಾಪಂಗಳಲ್ಲಿ 3ರಿಂದ 15 ಲಕ್ಷ ರು. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗುವುದು ಎಂದರು. ನರೇಗಾದಡಿಯಲ್ಲಿ 15 ಲಕ್ಷರು. ವೆಚ್ಚದಲ್ಲಿ ಪ್ರತಿ ಗ್ರಾಪಂ ಕೇಂದ್ರಗಳಲ್ಲಿ ರಾಜೀವ್ಗಾಂಧಿ ಸೇವಾ ಕೇಂದ್ರ ಸ್ಥಾಪನೆಗೆ ಅವಕಾಶವಿದ್ದು, ಈಗಾಗಲೇ 35 ಗ್ರಾಪಂಗಳಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, 40ಕ್ಕೂ ಹೆಚ್ಚು ಕಡೆ ನಿರ್ಮಾಣದ ಹಂತದಲ್ಲಿವೆ. ಉಳಿದ ಗಾಪಂಗಳಲ್ಲೂ ರಾಜೀವ್ಗಾಂಧಿ ಸೇವಾ ಕೇಂದ್ರ ಸ್ಧಾಪನೆ ಮಾಡುವ ಮೂಲಕ ಅನುದಾನ ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಸಂಸದ ಆರ್. ಧ್ರುವನಾರಾಯಣ ಮಾತನಾಡಿ, ಬೆಂಗಳೂರು- ಚಾಮರಾಜನಗರ ರೈಲು ಮಾರ್ಗದ ಭೂ ಸ್ವಾಧೀನ ಪ್ರಕ್ರಿಯೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಭೂ ಸ್ವಾಧೀನ ಪ್ರಕ್ರಿಯೆಗೆ ಹಣ ನೀಡುವುದಾಗಿ ಭರವಸೆ ನೀಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಗಾಗಿ ಈಗಾಗಲೇ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದರು.
ಚಾಮರಾಜನಗರ ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಹಿಂದುಳಿದಿದ್ದು, ನಿರ್ಮಲ ಭಾರತ್ ಅಭಿಯಾನದಲ್ಲಿ ದಕ್ಷಿಣದ ಜಿಲ್ಲೆಗಳ ಪೈಕಿ ಕೊನೆಯ ಸ್ಥಾನದಲ್ಲಿದೆ. ಬಡತನ ಹೆಚ್ಚಿನ ಪ್ರಮಾಣದಲ್ಲಿದೆ. ಜಿಲ್ಲೆಗೆ ಅಂಟಿರುವ ಹಿಂದುಳಿದ ಜಿಲ್ಲೆ ಎಂಬ ಅಣೆಪಟ್ಟಿ ತೊಡೆದುಹಾಕುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಜಿಲ್ಲಾಭಿವೃದ್ಧಿಗಾಗಿ ಶ್ರಮಿಸಬೇಕಾಗಿದೆ ಎಂದು ಮನವಿ ಮಾಡಿದರು.
ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷ ಡಿ.ಸಿ.ನಾಗೇಂದ್ರ, ಶಾಸಕರಾದ ಆರ್.ನರೇಂದ್ರ, ಎಸ್.ಜಯಣ್ಣ, ಜಿಪಂ ಉಪಾಧ್ಯಕ್ಷೆ ಕೇತಮ್ಮ, ತಾಪಂ ಅಧ್ಯಕ್ಷೆ ಶಶಿಕಲಾ, ಜಿಪಂ ಸಿಇಒ ಡಾ.ಕೆ.ಎಚ್. ನರಸಿಂಹಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಭಾರತಿ, ಹೆಚ್ಚುವರಿ ಎಸ್ಪಿ ವೆಂಕಟನಾಯಕ್, ಯೋಜನಾಧಿಕಾರಿ ವಸುಂಧರಾದೇವಿ, ಸಹಾಯಕ ಯೋಜನಾಧಿಕಾರಿ ಬಿ.ಎಂ.ಸಿದ್ದಲಿಂಗಸ್ವಾಮಿ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.