ಯಳಂದೂರು: ಖಾಸಗಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಮುಖಾ ಮುಖಿ ಡಿಕ್ಕಿಯ ಹಿನ್ನೆಲೆಯಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಮೆಳ್ಳಹಳ್ಳಿ ಗೇಟ್ ಬಳಿ ಭಾನುವಾರ ರಾತ್ರಿ ಸಂಭವಿಸಿದೆ.ಚಾಮರಾಜನಗರ ತಾಲೂಕಿನ ಬಂಡಿಗೆರೆ ನಿವಾಸಿ ಸಿದ್ದರಾಜು ಸಾವಿಗೀಡಾದ ದುರ್ದೈವಿ. ಸಿದ್ದರಾಜು ಸಂತೇಮರಳ್ಳಿಯಿಂದ ಯಳಂದೂರು ಕಡೆಗೆ ಬರುತ್ತಿದ್ದಾಗ ಯಳಂದೂರಿನಿಂದ ಮೈಸೂರಿಗೆ ಹೊರಟಿದ್ದ ಖಾಸಗಿ ಬಸ್ ಬೈಕ್ ಸವಾರನಿಗೆ ಡಿಕ್ಕಿಯೊಡೆದ ಪರಿಣಾಮ, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪ್ರತ್ಯಕ್ಷಗಳು ತಿಳಿಸಿದ್ದಾರೆ. ಈ ಸಂಬಂಧ ಯಳಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಸ್ ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೀನುಗಾರರಿಗೆ ಸಲಕರಣೆ ವಿತರಣೆ: ಸರ್ಕಾರದ ಸವಲತ್ತು ಪಡೆದುಕೊಳ್ಳುವವರು ಅದನ್ನು ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಇತರರಿಗೆ ಮಾದರಿಯಾಗಿ ಬದುಕಬೇಕು ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು. ಪಟ್ಟಣದ ಮೀನುಗಾರಿಕಾ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ರಾಜ್ಯ ವಲಯ ಯೋಜನೆಯಡಿ ಮೀನುಗಾರರಿಗೆ ಉಚಿತ ಹರಿಗೋಲು, ಬಲೆ ಮತ್ತು ಇತರೆ ಮೀನುಗಾರಿಕಾ ಸಾಧನಗಳನ್ನು ವಿತರಿಸಿ ಮಾತನಾಡಿದರು. ಜಿಪಂ ಸದಸ್ಯ ಸಿ.ಜೆ. ದ್ವಾರಕೀಶ್, ತಾಪಂ ಅಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷೆ ಲಕ್ಷ್ಮೀಕನಕರಾಜು ಇದ್ದರು.