ಚಾಮರಾಜನಗರ

ಆಗದ ಮಳೆ; ಒಣಗುತ್ತಿವೆ ಬೆಳೆ

ಕ.ಪ್ರ. ವಾರ್ತೆ    ಮೈಸೂರು    ಜು.11
ಮೈಸೂರು ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಶೇ.30 ರಿಂದ 40 ರಷ್ಟು ಬೆಳೆಗಳು ಒಣಗುತ್ತಿವೆ. ಕೂಡಲೇ ಮಳೆಯಾಗದಿದ್ದಲ್ಲಿ ಇಳುವರಿಯು ಕುಂಠಿತವಾಗಲಿದೆ. ಜಿಪಂ ಹಂಗಾಮಿ ಅಧ್ಯಕ್ಷ ಸಿ.ಜೆ.ದ್ವಾರಕೀಶ್ ಅವರು ಶುಕ್ರವಾರ ನಡೆಸಿದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಮಹಾಂತೇಶಪ್ಪ ಈ ಮಾಹಿತಿ ನೀಡಿದರು. ಮೈಸೂರು, ನಂಜನಗೂಡು ತಾಲೂಕುಗಳಲ್ಲಿ ಶೇ.100ಕ್ಕೂ ಹೆಚ್ಚು ಮಳೆಯಾಗಿದೆ. ಕೆ.ಆರ್. ನಗರದಲ್ಲಿ ಶೇ.92, ಟಿ.ನರಸೀಪುರದಲ್ಲಿ ಶೇ.85 ರಷ್ಟು ಮಳೆಯಾಗಿದೆ. ಆದರೆ ಪಿರಿಯಾಪಟ್ಟಣ, ಹುಣಸೂರು, ಎಚ್.ಡಿ. ಕೋಟೆ ತಾಲೂಕುಗಳಲ್ಲಿ ಕಡಿಮೆ ಮಳೆಯಾಗುತ್ತಿರುವುದರಿಂದ ಈಗಾಗಲೇ ಬಿತ್ತನೆಯಾಗಿರುವ ಬೆಳೆಗಳು ಒಣಗುತ್ತಿವೆ ಎಂದರು. ಮಳೆಯಾಗದಿರುವುದರಿಂದ ರೈತರು ಮೇಲುಗೊಬ್ಬರ ಕೂಡ ಕೊಡುತ್ತಿಲ್ಲ. ಪರಿಣಾಮ ಇಳುವರಿ ಕುಂಠಿತವಾಗುತ್ತದೆ. ಸದ್ಯದಲ್ಲಿಯೇ ಮಳೆಯಾಗದಿದ್ದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ರೈತರಿಗೆ ಬೆಳೆ ವಿಮೆ ಮಾಡಿಸುವಂತೆ ಸಲಹೆ ಮಾಡಿದ್ದು, ಮಳೆ ಕೈಕೊಟ್ಟು, ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಿಸಿದಲ್ಲಿ ಪರಿಹಾರ ನೀಡುವ ಬಗ್ಗೆ ಕಂದಾಯ ಇಲಾಖೆ ಕ್ರಮ ವಹಿಸಲಿದೆ ಎಂದು ವಿವರಿಸಿದರು. ಜಿಲ್ಲೆಯಲ್ಲಿ ರೈತರಿಗೆ ವಿತರಿಸಲು ಅಗತ್ಯವಿರುವ ರಸಗೊಬ್ಬರ, ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ ಎಂದು ಅವರು ಹೇಳಿದರು.



791 ಮಕ್ಕಳಲ್ಲಿ ಅಪೌಷ್ಟಿಕತೆ
ಜಿಲ್ಲೆಯ 791 ಮಕ್ಕಳಲ್ಲಿ ಅಪೌಷ್ಟಿಕತೆ ಕಂಡು ಬಂದಿದೆ. ಹಿಂದಿನ ವರ್ಷ 1,241 ಮಕ್ಕಳಲ್ಲಿ ಕಂಡುಬಂದಿತ್ತು. ವಾರದಲ್ಲಿ ನಾಲ್ಕು ದಿನ ಮೊಟ್ಟೆ, ಎರಡು ದಿನ ಹಾಲು ವಿತರಣೆ, ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮೊದಲಾದ ಕ್ರಮಗಳಿಂದ ಈ ಪ್ರಮಾಣ ಶೇ.40 ರಷ್ಟು ಕಡಿಮೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎನ್.ಆರ್. ವಿಜಯ್ ತಿಳಿಸಿದರು. ಚೆಲುವಾಂಬ ಆಸ್ಪತ್ರೆಯಲ್ಲಿ ಈ ಮಕ್ಕಳ ಚಿಕಿತ್ಸೆಗೆ ತಲಾ 35,000 ವೆಚ್ಚ ಮಾಡಲು ಅವಕಾಶವಿದೆ. ಸಿಎಫ್ಟಿಆರ್ಐ ನಂಜನಗೂಡು ತಾ. ತಾಂಡವಪುರದ 100 ಮಕ್ಕಳನ್ನು ಆಯ್ಕೆ ಮಾಡಿಕೊಂಡು, ಅಪೌಷ್ಟಿಕತೆಗೆ ಕಾರಣಗಳನ್ನು ಸಂಶೋಧಿಸುತ್ತಿದೆ ಎಂದರು. ಜಿಲ್ಲೆಗೆ 126 ಅಂಗನವಾಡಿ ಮೇಲ್ವಿಚಾರಕರು ಬೇಕು. ಆದರೆ 59 ಮಂದಿ ಮಾತ್ರ ಇದ್ದಾರೆ. ಅವರ ಮೂಲಕವೇ ಕೆಲಸ ಮಾಡಿಸಲಾಗುತ್ತಿದೆ ಎಂದು ತಿಳಿಸಿದರು. ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ತೋಟಗಾರಿಕೆ ನರ್ಸರಿ ಇದೆ. ಆದರೆ ಪಿರಿಯಾಪಟ್ಟಣ ತಾಲೂಕಿನಲ್ಲಿ ಏಕಿಲ್ಲ ಎಂದು ಹಂಗಾಮಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್ ಪ್ರಶ್ನಿಸಿದರು. ಮೈಸೂರಿನ ಹೆಬ್ಬಾಳು, ಕೆ.ಆರ್. ನಗರ ತಾಲೂಕಿನ ಚೌಕಹಳ್ಳಿ, ಹುಣಸೂರು, ವಾರಂಚಿ, ನಂಜನಗೂಡು, ಟಿ. ನರಸೀಪುರ, ಹೊರಳಹಳ್ಳಿಯಲ್ಲಿ ನರ್ಸರಿಗಳಿವೆ. ಪಿರಿಯಾಪಟ್ಟಣದಲ್ಲೂ ಆರಂಭಿಸಿ, ರೈತರಿಗೆ ತೆಂಗು ಮತ್ತಿತರ ಸಸಿಗಳ ವಿತರಣೆಗೆ ಕ್ರಮ ವಹಿಸುವುದಾಗಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್.ಎಂ. ನಾಗರಾಜ್ ತಿಳಿಸಿದರು. ಜಲಾನಯನ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾ ಜಲಾನಯನ ಅಧಿಕಾರಿ ಲಕ್ಷ್ಮಣ್ ಮಾಹಿತಿ ನೀಡಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಪದ್ಮ ಬಸವರಾಜು, ಸಿಇಒ ಪಿ.ಎ. ಗೋಪಾಲ್ ಮಾತನಾಡಿದರು.


ಅನ್ಯ ಬೆಳೆಗೆ ಉತ್ತೇಜನ ನೀಡಿ
ತಂಬಾಕಿಗೆ ಪರ್ಯಾಯವಾಗಿ ಮೆಕ್ಕೆ ಜೋಳ ಮತ್ತಿತರ ಬೆಳೆ ಬೆಳೆಯಲು ಉತ್ತೇಜನ ನೀಡಬೇಕು. ಕಾಳಸಂತೆಯಲ್ಲಿ ರಸಗೊಬ್ಬರ ಮಾರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಸಕಾಲದಲ್ಲಿ ಕೃಷಿ ಸಲಕರಣೆಗಳ ಸಹಾಯಧನ ವಿತರಿಸಬೇಕು ಎಂದು ಅಧ್ಯಕ್ಷರು ಸೂಚಿಸಿದರು. ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ದೇವದಾಸ್ ಮಾತನಾಡಿ, ಜಿಲ್ಲೆಯಲ್ಲಿ ಇನ್ನೂ ಮೂರು ತಿಂಗಳ ಮಟ್ಟಿಗೆ ಮೇವಿನ ಕೊರತೆ ಎದುರಾಗುವುದಿಲ್ಲ. ಆದರೂ 4.80 ಕೋಟಿ ಸಂಭಾವ್ಯ  ಕ್ರಿಯಾ ಯೋಜನೆ ರೂಪಿಸಿ, ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ. ಇಲವಾಲ ಬಳಿ ತೋಟಗಾರಿಕೆ ವಿವಿಗೆ ಸೇರಿದ 77 ಎಕರೆ ಜಾಗ, ಸುತ್ತೂರು ಹಾಗೂ ಕೃಷಿ ಇಲಾಖೆ ಜಾಗದಲ್ಲಿ ಮೇವು ಬೆಳೆಸಲಾಗಿದೆ ಎಂದರು. ಜಾನುವಾರುಗಳಿಗೆ ಕಾಲುಬಾಯಿ ಜ್ವರಕ್ಕೆ 7ನೇ ಸುತ್ತಿನ ಲಸಿಕೆ ಹಾಕಲು ಕ್ರಮ ವಹಿಸಲಾಗಿದೆ. ಇದಕ್ಕೆ ಕೆಎಂಎಫ್ ಕೂಡ ಸಹಕಾರ ನೀಡುತ್ತಿದೆ ಎಂದು ಹೇಳಿದರು. ಪಿರಿಯಾಪಟ್ಟಣ, ಹುಣಸೂರು, ಕೆ.ಆರ್. ನಗರ ತಾಲೂಕುಗಳಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡಬೇಕು. ಆದರೆ ಸ್ಥಳೀಯ ಜಾನುವಾರುಗಳು ಕಡಿಮೆಯಾಗುತ್ತಿವೆ ಎಂದು ದ್ವಾರಕೀಶ್ ಹೇಳಿದರು. ಇದನ್ನು ಒಪ್ಪಿಕೊಂಡ ದೇವದಾಸ್ ಸ್ಥಳೀಯ ಜಾನುವಾರುಗಳು ಕಡಿಮೆಯಾದರೂ ಜರ್ಸಿ ಹಸುಗಳನ್ನು ಸಾಕುತ್ತಿರುವುದರಿಂದ ಹಾಲಿನ ಉತ್ಪಾದನೆ ಹೆಚ್ಚಾಗಿದೆ ಎಂದರು.


ಇನ್ನೂ ಸೈಕಲ್ ಬಂದಿಲ್ಲ
ವಿದ್ಯಾರ್ಥಿಗಳಿಗೆ ವಿತರಿಸಲು ಇನ್ನೂ ಸೈಕಲ್ ಬಂದಿಲ್ಲ. ಆದರೆ ಶೇ.98 ರಷ್ಟು ಪಠ್ಯಪುಸ್ತಕ, ಶೇ.100 ರಷ್ಟು ಸಮವಸ್ತ್ರ ವಿತರಿಸಲಾಗಿದೆ ಎಂದು ಡಿಡಿಪಿಐ ಎಚ್.ಆರ್. ಬಸಪ್ಪ ತಿಳಿಸಿದರು. ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಜಿಲ್ಲೆ 23ನೇ ಸ್ಥಾನ, ಗುಣಮಟ್ಟದಲ್ಲಿ 4ನೇ ಸ್ಥಾನದಲ್ಲಿದೆ. ಮುಂದಿನ ಬಾರಿ ಫಲಿತಾಂಶದಲ್ಲಿ 10 ರೊಳಗೆ ಬರಲು ಕ್ರಮ ವಹಿಸಿದ್ದೇವೆ. 200 ಅತಿಥಿ ಶಿಕ್ಷಕರನ್ನು ನೇಮಕ ಮಾಡಿ, ಖಾಲಿ ಇರುವ ಕಡೆ ನಿಯೋಜಿಸಿದ್ದೇವೆ. ನೇಮಕಾತಿಯಲ್ಲಿ ಯಾವುದೇ ಪ್ರಭಾವಕ್ಕೆ ಒಳಗಾಗದೇ ಅರ್ಹತೆಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ ಎಂದರು. ನಗರದ ಎನ್ಟಿಎಂಎಸ್ ಶಾಲೆಗೆ 28 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಸರ್ಕಾರ ಮತ್ತು ರಾಮಕೃಷ್ಣ ಮಠದ ನಡುವೆ ಶಾಲೆಯ ಜಾಗದ ಹಸ್ತಾಂತರ ಕುರಿತು ಹೈಕೋರ್ಟ್ ತೀರ್ಪಿಗೆ ಕಾಯಲಾಗುತ್ತಿದೆ ಎಂದು ಹೇಳಿದರು.


ಕೆಡಿಪಿ ಸಭೆಯಲ್ಲಿ ಕನ್ನಡಪ್ರಭ ವರದಿ ಪ್ರಸ್ತಾಪ
ಕೆ.ಆರ್. ನಗರ ತಾಲೂಕಿನಲ್ಲಿ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸದೆ ಶಿಕ್ಷಕರೇ ಬಿಇಒ ಕಚೇರಿಗೆ ಬಂದು ಗೂಡ್ಸ್ ಆಟೋಗಳಲ್ಲಿ ಸಾಗಿಸಿದ ಬಗ್ಗೆ 'ಕನ್ನಡಪ್ರಭ'ದಲ್ಲಿ ಬಂದಿದ್ದ ವರದಿ ಶುಕ್ರವಾರ ಜಿಪಂ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಸ್ತಾಪವಾಯಿತು. ಹಂಗಾಮಿ ಅಧ್ಯಕ್ಷ ಸಿ.ಜೆ.ದ್ವಾರಕೀಶ್, ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸಬೇಕು. ಆದರೆ ಶಿಕ್ಷಕರೆ ಬಂದು ಗೂಡ್ಸ್ ಆಟೋಗಳಲ್ಲಿ ತೆಗೆದುಕೊಂಡು ಹೋಗಿರುವ ಬಗ್ಗೆ ವರದಿ ಬಂದಿದೆ ಎಂದಾಗ ಡಿಡಿಪಿಐ ಎಚ್.ಆರ್. ಬಸಪ್ಪ ಅವರು, ಹೌದು, ಈ ಬಗ್ಗೆ ಕನ್ನಡಪ್ರಭದಲ್ಲಿ ವರದಿ ಬಂದಿತ್ತು. ತಕ್ಷಣವೇ ಸಿಇಒ ಪಿ.ಎ.ಗೋಪಾಲ್, ನಾನು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದೇವೆ. ಬಹುತೇಕ ಪುಸ್ತಕಗಳನ್ನು ಶಾಲೆಗೆ ತಲುಪಿಸಲಾಗಿತ್ತು. ಆದರೆ ಒಂದು ಶೀರ್ಷಿಕೆಯ ಪುಸ್ತಕ ಮಾತ್ರ ನೀಡಿರಲಿಲ್ಲ. ಹೀಗಾಗಿ ಶಿಕ್ಷಕರು ಬಂದು ತೆಗೆದುಕೊಂಡು ಹೋಗಿದ್ದರು. ಈ ರೀತಿ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!