ಚಾಮರಾಜನಗರ: ಗೋವಾದಲ್ಲಿ ನಿರಂತರವಾಗಿ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಗೋವಾ ಸರ್ಕಾರದ ವಿರುದ್ದ ಕರ್ನಾಟಕ ಸೇನಾಪಡೆ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರ ನೃಪತುಂಗ ವೃತ್ತದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಗೋವಾ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸೇನಾಪಡೆಯ ರಾಜ್ಯಾಧ್ಯಕ್ಷ ಚಾ.ರಂ. ಶ್ರೀನಿವಾಸಗೌಡ ಮಾತನಾಡಿ, ಗೋವಾ ಸರ್ಕಾರ ಕನ್ನಡಿಗರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಿದ್ದು, ಅಲ್ಲಿನ ಕನ್ನಡಿಗರ ಆಸ್ತಿ ಪಾಸ್ತಿಗಳನ್ನು ಕಿತ್ತುಕೊಂಡು ನಮ್ಮ ರಾಜ್ಯಕ್ಕೆ ಒಡಿಸುತ್ತಿದ್ದು, ಹಿಂದೆಯೂ ಸಹ ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡಿತ್ತು.
ನಮ್ಮ ರಾಜ್ಯ ಸರ್ಕಾರ ತನಗೆ ಏನು ಗೊತ್ತಿಲ್ಲದ ರೀತಿ ಮೌನವನ್ನು ವಹಿಸಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದರು.
ನಮ್ಮ ರಾಜ್ಯದಲ್ಲಿ ಪರಭಾಷಿಕರು ಐಷಾರಾಮಿ ಜೀವನವನ್ನು ನಡೆಸುತ್ತಿದ್ದು, ನಮ್ಮ ನೆರೆಯ ರಾಜ್ಯವಾದ ಗೋವಾದಲ್ಲಿ ಕನ್ನಡಿಗರು ತುತ್ತು ಅನ್ನವು ಇಲ್ಲದೇ ಬಹಳ ಸಂಕಷ್ಟದಲ್ಲಿರುವುದು ಸೋಜಿಗದ ಸಂಗತಿಯಾಗಿದೆ. ತಕ್ಷಣ ರಾಜ್ಯ ಸರ್ಕಾರ ಗೋವಾ ಸರ್ಕಾರದ ಜೊತೆ ಮಾತನಾಡಿ ನಮ್ಮ ಕನ್ನಡಿಗರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಅಗ್ರಹಿಸಿದರು.
ಮುಖಂಡ ಶಾ. ಮುರಳಿ ಮಾತನಾಡಿ, ಹಿಂದೆ ಗೋವಾ ಕನ್ನಡಿಗರನ್ನು ಓಡಿಸಿದ್ದಾಗ ನಾವೆಲ್ಲಾ ಗೋವಾಕ್ಕೆ ತೆರಳಿ ಅಲ್ಲಿನ ಕನ್ನಡಿಗರಿಗೆ ಆಹಾರ ಪದಾರ್ಥ ಹೊದಿಕೆ ನೀಡಿ ಅವರಿಗೆ ದೈರ್ಯ ಹೇಳಿ ಬಂದಿದ್ದೇವು. ಆದರೆ, ಗೋವಾ ಸರ್ಕಾರ ಪುನ- ದೌರ್ಜನ್ಯ ನಡೆಸುತ್ತಿರುವುದು ಖಂಡನೀಯ. ಅಲ್ಲಿನ ಕನ್ನಡಿಗರಿಗೆ ಕೆಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಸೂಕ್ತ ರಕ್ಷಣೆ ನೀಡಬೇಕು. ರಾಜ್ಯ ಸರ್ಕಾರವು ಸಹ ಈ ವಿಚಾರದಲ್ಲಿ ತನ್ನ ಇಚ್ಚಾಶಕ್ತಿಯನ್ನು ಪ್ರದರ್ಶಿಸಿ ಅಲ್ಲಿನ ಕನ್ನಡಿಗರಿಗೆ ನೆರವು ನೀಡಬೇಕು ಎಂದು ಅಗ್ರಹಿಸಿದರು.
ಪ್ರತಿಭಟನೆಯಲ್ಲಿ ಕನ್ನಡ ಚಳುವಳಿ ಹೋರಾಟಗಾರರಾದ ಗು. ಪುರುಷೋತ್ತಮ್, ಚಾ.ಗು. ನಾಗರಾಜು, ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯ್ಕ, ಚಾ.ಹ. ಶಿವರಾಜು. ಟೈಲರ್ ನಾಗರಾಜು, ಸಿ.ಸಿ ಪ್ರಕಾಶ್, ಅರುಣ್ ಕುಮಾರ್, ನಾಗರಾಜು, ಹರಿ, ಸುಬ್ರಹ್ಮಣ್ಯ, ಶಿವಣ್ಣ, ಕಾಂತರಾಜು ಇನ್ನಿತರರು ಭಾಗವಹಿಸಿದ್ದರು.
ಶಾಲೆಯಲ್ಲಿ ಕುಡಿವ ನೀರು ಕೊಡಿ ಸ್ವಾಮಿ
ಹನೂರು: ಶಾಲೆಯಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆಗಾಗಿ ಆಗ್ರಹಿಸಿ ಹನೂರು ವ್ಯಾಪ್ತಿಯ ಮಾರಳ್ಳಿ ಸರ್ಕಾರಿ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ದಿನ್ನಳ್ಳಿ ಗ್ರಾಮ ಪಂಚಾಯ್ತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯ್ತಿ ಮುಂಭಾಗ ಸಾರಿಗೆ ಬಸ್ ಅನ್ನು ತಡೆದು ಸಂಬಂದಿಸಿದವರು ಸ್ಧಳಕ್ಕೆ ಆಗಮಿಸಿ ಭರವಸೆ ಕೊಡುವವರೆಗೂ ಪ್ರತಿಭಟನೆಯನ್ನು ಕೈಬಿಡುವುದಿಲ್ಲವೆಂದು ಪಟ್ಟು ಹಿಡಿದರು. ಶಾಲೆಯ ಆವರಣದಲ್ಲಿರುವ ಎರಡು ಬೋರ್ವೆಲ್ಗಳಲ್ಲಿ ಒಂದು ದುರಸ್ತಿಗೊಂಡಿದ್ದು, ಮತ್ತೊಂದರಲ್ಲಿ ನೀರಿಲ್ಲದೆ ನೀರುಪಯುಕ್ತವಾಗಿದೆ.
ಸತ್ಯಮಂಗಲ, ಗಾಜನೂರು, ಬೋರೆದೊಡ್ಡಿ, ಗೊಲ್ಲರದಿಬ್ಬ, ಕುತ್ಗುಳಿ ಇನ್ನಿತರ ಗುಡ್ಡಗಾಡು ಪ್ರದೇಶಗಳಿಂದ ಈ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಒಂದು ತಿಂಗಳಿನಿಂದ ಕುಡಿಯಲು ನೀರಿಲ್ಲದೆ ತೊಂದರೆಯಾಗಿದೆ. ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಮೂವರು ಅಡಿಗೆಯವರು ಒಂದು ಕೀಲೋ ಮೀಟರ್ ದೂರದಲ್ಲಿರುವ ರೈತ ಮಾದೇವನಾಯಕ ಜಮೀನಿನಲ್ಲಿ ವಿದ್ಯುತ್ ಇರುವಾಗ ಕಾದು ನೀರು ತರಬೇಕಾಗಿದೆ. ಶೌಚಕ್ಕೂ ಸಹ ನೀರಿಲ್ಲದೆ ವಿದ್ಯಾರ್ಥಿಗಳು ಪರಾದಾಡುತ್ತಿದ್ದಾರೆ ಎಂದು ದೂರಿದರು.
ಗ್ರಾಮಪಂಚಾಯ್ತಿ ಸದಸ್ಯ ರವಿನಾಯಕ್ ಸ್ಥಳಕ್ಕೆ ಆಗಮಿಸಿ, ನಾಲ್ಕು ದಿನಗಳಲ್ಲಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು. ಪ್ರತಿಭಟನೆಯಲ್ಲಿ ಮಾದೇವನಾಯಕ, ಕೃಷ್ಣನಾಯಕ ಶಿವಚಂದ್ರ ಶಾಲಾ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.