ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಪ್ರವಾಸಿ ಸ್ಥಳವಾದ ಭರಚುಕ್ಕಿಯಲ್ಲಿ ಆ. 16 ಮತ್ತು 17 ರಂದು ಎರಡು ದಿನಗಳ ಜಲಪಾತೋತ್ಸವ ಆಯೋಜಿಸಲಾಗಿದೆ.
ಜಿಲ್ಲಾಡಳಿತ, ಪ್ರವಾಸೋದ್ಯಮ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ 2 ದಿನಗಳ ಭರಚುಕ್ಕಿಯಲ್ಲಿ ಕಾವೇರಿ ನದಿಯು ವಿವಿಧ ಬಣ್ಣಗಳನ್ನು ಪಡೆದುಕೊಂಡು ಜನರನ್ನು ಆಕರ್ಷಿಸಲಿದೆ. ಸುಂದರ ಬೆಳಕು ಹೊಸ ರಂಗನ್ನು ಉಂಟುಮಾಡಲಿದೆ. ಇದರೊಂದಿಗೆ ಜಲಪಾತದ ಮಗ್ಗುಲ್ಲಲೇ ಸ್ಥಳೀಯ ಜಾನಪದ ಕಲಾವಿದರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಯಿತು.
ಭರಚುಕ್ಕಿ ವ್ಯಾಪ್ತಿಯಲ್ಲಿಯು ಸಹ ಹಲವು ಪ್ರಸಿದ್ಧ ಪವಿತ್ರ ಧಾರ್ಮಿಕ ಸ್ಥಳಗಳಿವೆ. ಪ್ರವಾಸಿಗರನ್ನು ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ದೃಷ್ಟಿಯಿಂದ ಜಲಪಾತೋತ್ಸವ ನಡೆಸಲು ತೀರ್ಮಾನಿಸಲಾಗಿದೆ. ಮೂರನೇ ಬಾರಿಗೆ ಜಿಲ್ಲೆಯಲ್ಲಿ ಜಲಪಾತೋತ್ಸವ ಭರಚುಕ್ಕಿ ಜಲಪಾತ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿರುವ ಪ್ರವಾಸಿಗರ ಅನುಕೂಲಕ್ಕಾಗಿ ಲೋಪ-ದೋಷಗಳಾಗದಂತೆ ಮುನ್ನಚ್ಚರಿಕೆ ವಹಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಯಾತ್ರಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಮಾಡಬೇಕು. ಆರೋಗ್ಯ ಸೇವೆಗೆ ವೈದ್ಯಕೀಯ ಸಿಬ್ಬಂದಿ ಕಲ್ಪಿಸಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಾಂಡುವಿಜಯನ್ಗೆ ಸಚಿವರು ಸೂಚಿಸಿದರು. ಕೊಳ್ಳೇಗಾಲ ನಗರಸಭೆ ವತಿಯಿಂದ ಶುಚಿತ್ವ ಕಾಪಾಡಬೇಕು. ಜಲಪಾತೋತ್ಸವ ಈ ಬಾರಿಯೂ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು. ವಿದ್ಯುತ್ ಇಲಾಖೆಯಿಂದ ವಿದ್ಯುದ್ಧೀಕರಣ ವ್ಯವಸ್ಥೆ ಮಾಡಬೇಕು. ಸೂಕ್ತ ಸ್ಥಳದಲ್ಲಿ ಪಾರ್ಕಿಂಗ್ ಕಲ್ಪಿಸಬೇಕು ಎಂದರು.
ಪರಿಚಯವಿರುವ ಫಲಕ ಹಾಕಿ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಸ್ಥಳಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯು ಜಿಲ್ಲಾ ಪ್ರವಾಸಿ ತಾಣಗಳ ಸಂಕ್ಷಿಪ್ತ ಪರಿಚಯವಿರುವ ಫಲಕಗಳನ್ನು ಭರಚುಕ್ಕಿಯ ಪ್ರದೇಶದ ಒಳಭಾಗದಲ್ಲಿ ಅಳವಡಿಸಬೇಕು. ಕಳೆದ ಬಾರಿ ಆದ ನ್ಯೂನತೆ, ತಪ್ಪುಗಳನ್ನು ಸರಿಪಡಿಸಿಕೊಂಡು ಈ ಬಾರಿ ಸುಸಂಘಟಿತವಾಗಿ ಜಲಪಾತ ಉತ್ಸವ ಆಯೋಜನೆ ಮಾಡಬೇಕು. ಈ ಬಾರಿ ಪ್ರದರ್ಶನ ಮಳಿಗೆಗಳ ಸ್ಥಾಪನೆಗೆ ಅವಕಾಶವಿಲ್ಲ. ಕೇವಲ ಆಹಾರ ಮಳಿಗೆಗಳು ಇರಬೇಕು ಎಂದು ಸೂಚಿಸಿದರು. ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ, ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ, ಎಸ್ಪಿ ಪಿ. ರಾಜೇಂದ್ರ ಪ್ರಸಾದ್, ಜಿಪಂ ಸಿಇಒ ಡಾ.ಕೆ.ಎಚ್. ನರಸಿಂಹಮೂರ್ತಿ, ಜಿಪಂ ಉಪ ಕಾರ್ಯದರ್ಶಿ ಮುನಿರಾಜಪ್ಪ, ಎಸಿ ಸತೀಶ್ಬಾಬು, ಆಹಾರ ಇಲಾಖೆ ಡಿಡಿ ಸಂಬಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಅಣ್ಣೇಗೌಡ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಜನಾರ್ದನ್ ಇತರರು ಇದ್ದರು.