ಚಿಕ್ಕಮಗಳೂರು: ಸಂಘ, ಸಂಸ್ಥೆಗಳು ಅಭಿವೃದ್ಧಿ ಹೊಂದುವುದರ ಜೊತೆಗೆ ಸಮಾಜಮುಖಿ ಕೆಲಸಗಳನ್ನು ನಿರ್ವಹಿಸಲು ಪ್ರತಿಯೊಬ್ಬ ಸದಸ್ಯರು ಕೈಜೋಡಿಸುವಂತೆ ಚಿಕ್ಕಮಗಳೂರು ಜಿಲ್ಲಾ ಮುದ್ರಣಕಾರರ ಸಂಘದ ಅಧ್ಯಕ್ಷ ನರೇಂದ್ರ ಹೇಳಿದ್ದಾರೆ.
ನಗರದ ಮಲ್ಲಂದೂರು ರಸ್ತೆಯಲ್ಲಿರುವ ಸೂರಿ ಕಾಂಪ್ಲೆಕ್ಸ್ನಲ್ಲಿ ನಡೆದ ಸರ್ವಸದಸ್ಯರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸಂಘಟನೆ ಮೂಲಕ ಸಮಸ್ಯೆಗಳನ್ನು ಪರಿಹರಿಸುವುದು ಸುಲಭ. ಸಂಘಗಳ ಏಳಿಗೆಗೆ ಪ್ರತಿಯೊಬ್ಬರೂ ಕೆಲಸ ಮಾಡಬೇಕು. ಕೇವಲ ಪದಾಧಿಕಾರಿಗಳಷ್ಟೇ ಅಲ್ಲದೆ ಸದಸ್ಯರು ಶ್ರಮವಹಿಸಿದಾಗ ಮಾತ್ರ ಸಂಘದ ಅಭಿವೃದ್ಧಿ ಸಾಧ್ಯ ಎಂದರು.
ಮುದ್ರಣಕಾರರು ಆಧುನಿಕ ತಂತ್ರಜ್ಞಾನ ಬಳಸಿ ಶೀಘ್ರ ಸೇವೆ ಒದಗಿಸುವುದರ ಜೊತೆಗೆ ಅಕ್ಷರ ಜ್ಞಾನ ಹರಡಲು ಸಹಕರಿಸುತ್ತಿದ್ದೇವೆ. ಸಂಘದ ಸ್ವಂತ ನಿವೇಶನಕ್ಕೆ ಸಚಿವರ ಬಳಿ ನಿಯೋಗ ಹೋಗಿ ಮನವಿ ಮಾಡಿಕೊಳ್ಳಲಾಗುವುದು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಸಂಘ ರಚನೆ ಮಾಡಿ ಮುದ್ರಣ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಲಾಗುವುದು. ಅಲ್ಲದೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ಪುರಸ್ಕರಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಇತ್ತೀಚೆಗೆ ನಿಧನರಾದ ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಸಿಎಂಎಸ್ ಶಾಸ್ತ್ರಿ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಘದ ಉಪಾಧ್ಯಕ್ಷ ಹಾಲಪ್ಪ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಸಹ ಕಾರ್ಯದರ್ಶಿ ಲೋಕೇಶ್, ತೀರ್ಥಕುಮಾರ್, ಸಂಘಟನಾ ಕಾರ್ಯದರ್ಶಿ ಕೆ.ಆರ್. ಜಯಪ್ರಕಾಶ್, ಸೋಮಶೇಖರ್, ಚಂದ್ರಶೇಖರ್, ಖಜಾಂಚಿ ನವೀನ್ ಕುಮಾರ್, ಜಗದೀಶ್ ರೈ, ಹರೀಶ್ ಸಿಂಗ್, ಭಗವತಿ ಹರೀಶ್ ಉಪಸ್ಥಿತರಿದ್ದರು.