ಚಳ್ಳಕೆರೆ: ವಿಕಲಚೇತನ ಮಕ್ಕಳಿಗೂ ಸೂಕ್ತ ಆರೋಗ್ಯ ಸೌಭಾಗ್ಯ ನೀಡುವ ಸರ್ಕಾರದ ಯೋಜನೆ ಫಲಪ್ರದವಾಗಿದ್ದು, ಇಂದು ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 500ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದಾರೆ. ಇಂತಹ ಮಕ್ಕಳ ಬೆಳವಣಿಗೆಯ ಬಗ್ಗೆ ಪೋಷಕರು ಸದಾ ಜಾಗೃತರಾಗಿರಬೇಕೆಂದು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಕಿವಿ ಮೂಗು ಮತ್ತು ಗಂಟಲು ತಜ್ಞೆ ಡಾ. ಜಯಲಕ್ಷ್ಮಿ ಮನವಿ ಮಾಡಿದ್ದಾರೆ.
ಅವರು ಇಲ್ಲಿನ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಒಂದರಿಂದ ಹದಿನಾಲ್ಕರ ತನಕ ವಿಕಲಚೇತನ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪೋಷಕರು ಹಾಗೂ ಸಾರ್ವಜನಿಕರು ವಿಕಲಚೇತನ ಮಕ್ಕಳ ವಿಚಾರದಲ್ಲಿ ಹೆಚ್ಚಿನ ಸಹಾನುಭೂತಿ ಹೊಂದಿರಬೇಕು ಎಂದರು.
ಕ್ಷೇತ್ರ ಸಮನ್ವಯ ಅಧಿಕಾರಿ ಆರ್. ಹನುಮಂತರಾಯ ಮಾತನಾಡಿ, ವಿಕಲಚೇತನ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸುವ ಮೂಲಕ ಅಂತಹ ಮಕ್ಕಳ ಬಾಳಲ್ಲಿ ಹೊಸ ಚೇತನ ತುಂಬುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಈ ಕಾರ್ಯ ಅತ್ಯಂತ ಯಶಸ್ವಿಯಾಗಿದೆ. ನಿರೀಕ್ಷೆಗೂ ಮೀರಿ ತಾಲೂಕಿನ ವಿವಿಧ ಭಾಗಗಳಿಂದ ಪೋಷಕರು ತಮ್ಮ ಮಕ್ಕಳನ್ನು ಇಲ್ಲಿಗೆ ಕರೆತಂದಿದ್ದಾರೆ. ತಜ್ಞ ವೈದ್ಯರು ಪರೀಕ್ಷೆ ನಡೆಸಿ ಹಲವಾರು ಅಂಗವಿಕಲ ಮಕ್ಕಳಿಗೆ ಚಿಕಿತ್ಸೆ ನೀಡಿದ್ದಾರೆ. ದೃಡೀಕರಣ ಪತ್ರವನ್ನು ಸಹ ನೀಡಿರುತ್ತಾರೆ. ಶಿಕ್ಷಕರೂ ಹಾಗೂ ಸಮಾಜದ ವಿವಿಧ ವರ್ಗ್ಗಗಳ ಜನರು ಸಹಕಾರ ನೀಡುವ ಮೂಲಕ ಅಂಗವಿಕಲ ಮಕ್ಕಳ ಬಾಳಿಗೆ ಹೊಸ ಶಕ್ತಿ ತುಂಬಿದ್ದಾರೆ ಎಂದರು. ಶಿಬಿರದಲ್ಲಿ ನೇತ್ರತಜ್ಞ ಡಾ. ಸೀತಾರಾಮ್, ಡಾ. ಜಯಲಕ್ಷಿ, ಮೂಳೆತಜ್ಞ ಡಾ. ದಯಾನಂದಬಾಬು, ನೌಕರ ಸಂಘದ ಉಪಾಧ್ಯಕ್ಷ ಪಿ. ಮಾರಣ್ಣ, ಆರೋಗ್ಯ ಸಹಾಯಕ ಎನ್.ಬಿ. ತಿಪ್ಪೇಸ್ವಾಮಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ್ ರೆಡ್ಡಿ, ಮಹಂತೇಶ್, ತಿಮ್ಮಾರಾಯ ಮುಂತಾದವರು ಭಾಗವಹಿಸಿದ್ದರು.