ಚಿತ್ರದುರ್ಗ: ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಶ್ರೀ ಶಂಕರ ಟಿವಿಯವರ ಶ್ರೀ ಶಂಕರ ಮ್ಯಾಟ್ರಿಮೋನಿ ವತಿಯಿಂದ ಲಿಂಗಾಯತ ವಧು-ವರರ ಮುಖಾಮುಖಿ ಬೃಹತ್ ಸಮಾವೇಶ ಹಾಗೂ ವಿವಾಹ ಸಂಬಂಧಿ ವಸ್ತು ಪ್ರದರ್ಶನವನ್ನು ಆಗಸ್ಟ್ 16 ರಂದು ಶನಿವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಆಯೋಜಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಲಿಂಗಾಯಿತ ವಧು-ವರರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳುವಂತೆ ಚಿತ್ರದುರ್ಗ ಜಿಲ್ಲಾ ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್. ಷಣ್ಮುಖಪ್ಪ ಕೋರಿದ್ದಾರೆ. ಭಾಗವಹಿಸಲು ಇಚ್ಛಿಸುವವರು ದೂ. ಸಂ. 080 - 43000999 ಸಂಪರ್ಕಿಸಬಹುದು.
ಹೊಸದುರ್ಗದಲ್ಲಿ ಮದ್ಯ ವರ್ಜನ ಶಿಬಿರ
ಹೊಸದುರ್ಗ: ಹೊಸದುರ್ಗದ ಸಿದ್ಧರಾಮೇಶರ ಸಮುದಾಯ ಭವನದಲ್ಲಿ 8 ದಿನಗಳ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆಯೋಜಿಸಿರುವ ಮದ್ಯ ವರ್ಜನ ಶಿಬಿರವನ್ನು ಕುಂಚಟಿಗ ಮಹಾ ಸಂಸ್ಥಾನದ ಶ್ರೀ ಶಾಂತವೀರ
ಸ್ವಾಮೀಜಿ ಉದ್ಘಾಟಿಸಿದರು. ಶಾಂತವೀರಶ್ರೀಗಳು ಮಾತನಾಡಿ, ಕುಡಿತದ ಚಟಕ್ಕೆ 18 ರಿಂದ 45 ವರ್ಷದೊಳಗಿನ ಜನತೆ ಬಲಿಯಾಗಿ ಸಂಸಾರವನ್ನು ಹಾಳು ಮಾಡುತ್ತಿದ್ದಾರೆ. ನಿತ್ಯ ನೆಮ್ಮದಿಯಿಲ್ಲದೆ ನರಕದ ಜೀವನವನ್ನು ನಡೆಸುವಂತಾಗಿದೆ. ಕುಡುಕರು ಮನ ಪರಿವರ್ತನೆ ಮಾಡಿಕೊಂಡು ಚಟದಿಂದ ಮುಕ್ತಿಗೊಳ್ಳಬಹುದು ಎಂದರು. ಅಧ್ಯಕ್ಷತೆ ವಹಿಸಿಕೊಂಡ ಮಾಜಿ ಶಾಸಕ ಇಲ್ಕಲ್ ವಿಜಯಕುಮಾರ್ ಮಾತನಾಡಿ, ಹೆಂಡತಿ, ಮಕ್ಕಳ ನೆಮ್ಮದಿ ಜೀವನಕ್ಕಾಗಿ ಕುಡಿತ ಬಿಟ್ಟು ಸಮಾಜದಲ್ಲಿ ಗೌರವದಿಂದ ಬಾಳಲು ಈ ಶಿಬಿರ ಸಹಕಾರಿಯಾಗಿದೆ ಎಂದರು. ಜಿಲ್ಲಾ ಪಂಚಾಯ್ತಿ ಸದಸ್ಯರಾದ ಪರುಶುರಾಮಪ್ಪ , ಹನುಮಂತಪ್ಪ ಮಾತನಾಡಿ ದೇಶದ ಅಭಿವೃದ್ಧಿಗೆ ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕು. ಕುಟುಂಬದಲ್ಲಿ ವ್ಯಕ್ತಿ ಕುಡಿತದ ಚಟಕ್ಕೆ ಬಲಿಯಾದರೆ ಕುಟುಂಬ ಹಾಳಾಗುವುದಲ್ಲದೆ ದೇಶದ ಅಭಿವೃದ್ಧಿಗೆ ಮಾರಕವಾಗುತ್ತದೆ ಎಂದರು. ಶಿಬಿರಾಧಿಕಾರಿ ನಾಗೇಶ್ , ಜಿಲ್ಲಾ ನಿರ್ದೇಶಕರಾದ ಸುಬ್ರಹ್ಮಣ್ಯ ಪ್ರಸಾದ್ , ಪುರಸಭೆ ಅಧ್ಯಕ್ಷರಾದ ಯಶೋಧಮ್ಮ, ಶಿಮುಲ್ ನಾಗರಾಜಪ್ಪ, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಕಾಚಾಪುರದ ರಂಗಪ್ಪ, ಅಶೋಕ್, ಹೆಬ್ಬಳ್ಳಿ ಮಲ್ಲಿಕಾರ್ಜುನ್, ತಾಲೂಕು ಯೋಜನಾಧಿಕಾರಿ ಪ್ರೇಮಾನಂದ್, ತಿಮ್ಮಯ್ಯ ನಾಯ್ಕ್ ಭಾಗವಹಿಸಿದ್ದರು.
ಲೋಡ್ ಶೆಡ್ಡಿಂಗ್ ಖಂಡಿಸಿ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
ಹಿರಿಯೂರು: ವಿದ್ಯುತ್ ಲೋಡ್ ಶೆಡ್ಡಿಂಗ್ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪಕ್ಷದ ರೈತ ಮೋರ್ಚಾದ ತಾಲೂಕು ಘಟಕ ಸೋಮವಾರ ಸಂಜೆ ಪಟ್ಟಣದ ಬೆಸ್ಕಾಂ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿತು. ರೈತ ಮೋರ್ಚಾದ ಅಧ್ಯಕ್ಷ ಈರದಿಮ್ಮಯ್ಯ ಮಾತನಾಡಿ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿ ಮಾಡಿರುವ ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು, ಕೂಡಲೇ ಲೋಡ್ ಶೆಡ್ಡಿಂಗ್ ಆದೇಶವನ್ನು ಹಿಂಪಡೆಯಬೇಕು ರೈತರಿಗೆ ಕನಿಷ್ಠಪಕ್ಷ 8 ಗಂಟೆ ತ್ರೀ ಫೇಸ್ ವಿದ್ಯುತ್ ನೀಡಬೇಕು. ಮತ್ತು ರೈತರ ಪಂಪ್ ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಬೆಸ್ಕಾಂ ವಿಳಂಬ ನೀತಿ ಅನುಸರಿಸದಂತೆ ಕಠಿಣ ಕಾನೂನು ರೂಪಿಸಬೇಕೆಂದು ಒತ್ತಾಯಿಸಿದರು. ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಎಂ.ವಿ.ಹರ್ಷ ಮಾತನಾಡಿ, ರಾಜ್ಯ ಸರ್ಕಾರವು ನಿದ್ರಾವಸ್ಥೆಯಲ್ಲಿದೆ ಎಂಬುದನ್ನು ಸ್ವತಃ ಮುಖ್ಯಮಂತ್ರಿಗಳೇ ಸದನದಲ್ಲಿ ಸಾಬೀತು ಮಾಡಿದ್ದಾರೆ. ಈ ನಡುವೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸಹ ರೈತ ವಿರೋಧಿ ಕ್ರಮಗಳಿಗೆ ಮುಂದಾಗಿ ವಿದ್ಯುತ್ ಕಡಿತ, ಅನಿಯಮಿತ ಲೋಡ್ ಶೆಡ್ಡಿಂಗ್‌ಗೆ ಮುಂದಾಗಿರುವುದು ಇವರ ಸಾರ್ವಜನಿಕ ಕಾಳಜಿ ಎಂತದ್ದೆಂಬುದನ್ನು ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದರು. ಜಿಲ್ಲಾ ಘಟಕದ ಎಂ.ಎಸ್.ರಾಘವೇಂದ್ರ, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಕೇಶವಮೂರ್ತಿ, ನೀಲಕಂಠಪ್ಪ, ಚಂದ್ರಶೇಖರ ಪಾಟೀಲ್, ತಿಮ್ಮರಾಜ್ ಯಾದವ್, ಸರವಣ, ಬೇಲಪ್ಪ, ತಿಪ್ಪೇಸ್ವಾಮಿ,ಶ್ರೀನಿವಾಸ್, ಸಾಧಿಕ್, ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ, ದಾಕ್ಷಾಯಣಮ್ಮ, ಸುಮಿತ್ರಮ್ಮ, ಸಲೀಂ, ರಾಜಪ್ಪ, ಚಿದಾನಂದ, ದುಬೈ ತಿಪ್ಪೇಸ್ವಾಮಿ ಇದ್ದರು.