ಶ್ರೀರಾಂಪುರ: ಕೃಷಿಗೆ ಹೆಚ್ಚಿನ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದ್ದು, ರೈತ ಸ್ನೇಹಿಯಾದ ಸಾವಯವ ಕೃಷಿಗೆ ರೈತರು ಮುಂದಾಗಬೇಕು ಎಂದು ಕುರುಬರಹಳ್ಳಿ ತಾಪಂ ಸದಸ್ಯೆ ಮಮತಾ ತಿಳಿಸಿದರು.
ಸಮೀಪದ ಮಲ್ಲಿಹಳ್ಳಿ ಗ್ರಾಮದಲ್ಲಿ ಸಾವಯವ ಭಾಗ್ಯ ಯೋಜನೆಯಡಿ ರೈತರಿಗೆ ಕೃಷಿ ಇಲಾಖೆಯಿಂದ ಉಚಿತವಾಗಿ ಹೊಂಗೆ ಸಸಿಗಳನ್ನು ವಿತರಿಸಿ ಮಾತನಾಡಿದರು.
ಆಹಾರ ಕ್ರಾಂತಿ ನೆಪದಲ್ಲಿ ಅತಿಯಾದ ರಾಸಾಯನಿಕ ಹಾಗೂ ಕೀಟನಾಶಕಗಳ ಬಳಕೆಯಿಂದ ನಾವು ಬಳಸುವ ಆಹಾರ ಪದಾರ್ಥಗಳು ವಿಷಕಾರಿಯಾಗಿ ಅನಾರೋಗ್ಯ, ಅಪೌಷ್ಟಿಕತೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ರೈತರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು. ಕೃಷಿ ಇಲಾಖೆ ಕ್ಷೇತ್ರಾಧಿಕಾರಿ ಗಿರೀಶ್ ಮಾತನಾಡಿ, ರೈತರಲ್ಲಿ ಹಸಿರೆಲೆ ಗೊಬ್ಬರ ತಯಾರಿಕೆಗೆ ಉತ್ತೇಜಿಸುವ ಸಲುವಾಗಿ ಹೊಂಗೆ ಸಸಿಗಳನ್ನು ರೈತರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ಅಲ್ಲದೆ ಕೃಷಿ ಇಲಾಖೆಯಲ್ಲಿ ಸಿಗುವ ಜೈವಿಕ ಗೊಬ್ಬರಗಳನ್ನು ಹೆಚ್ಚಾಗಿ ಬಳಸುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಹಾಯಕ ಭದ್ರೇಶ್, ಸಾವಯವ ಸಮಿತಿ ಅಧ್ಯಕ್ಷ ಮೈಲಾರಪ್ಪ, ಸದಸ್ಯರಾದ ಪ್ರಭಯ್ಯ, ನಾಗರಾಜು, ಅನುವುಗಾರ ಜಯಣ್ಣ ಮತ್ತಿತರರು ಹಾಜರಿದ್ದರು.