ಚಳ್ಳಕೆರೆ: ತಾಲೂಕಿನ ಗಡಿ ಭಾಗದಲ್ಲಿರುವ ಬೆಳಗೆರೆ ನಾರಾಯಣಪುರ ಗ್ರಾಮದ ಲಲಿತಮ್ಮ ಕೆ.ಎಚ್. ರಂಗನಾಥ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿ ಬಿ.ವಿ ಮಾಧವ ಗ್ರಾಮದ ಸುತ್ತಮುತ್ತಲಿರುವ ಕೊಳವೆ ಬಾವಿಗಳನ್ನು ಗ್ರಾಮಸ್ಥರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಮುಚ್ಚುವ ಮಹಾತ್ಕಾರ್ಯಕ್ಕೆ ಮುಂದಾಗಿದ್ದಾರೆ.
ಶ್ರಮದಾನದ ಮೂಲಕ ಎಲ್ಲಾ ಕೊಳವೆ ಬಾವಿಗಳನ್ನು ಮುಚ್ಚಿದ್ದು, ಈ ಕ್ರಮ ಇಲ್ಲಿನ ಗ್ರಾಮಸ್ಥರಿಗೆ ಹೆಚ್ಚು ಸಂತಸ ಉಂಟು ಮಾಡಿದೆ.
ಇಲ್ಲಿನ ತೆರೆದ ಕೊಳವೆ ಬಾವಿಗಳ ಬಗ್ಗೆ ತಾಲೂಕು ಆಡಳಿತ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸದಿದ್ದರೂ ಕಾಲೇಜಿನ ಆಡಳಿತ ವರ್ಗ ಗ್ರಾಮದ ಹಿತಕ್ಕಾಗಿ ಇಂತಹ ಒಂದು ಪುಣ್ಯ ಕಾರ್ಯ ಮಾಡಿರುವುದು ಅಭಿನಂದನಾರ್ಹ. ಪ್ರಾಚಾರ್ಯ ಎಚ್.ಆರ್.ಅಶೋಕ್, ಉಪನ್ಯಾಸಕರಾದ ಬಿ.ಆರ್. ಮಂಜುನಾಥ್, ಟಿ.ಎನ್. ರಂಗನಾಥ, ದಿನೇಶ್, ಚಂದ್ರಶೇಖರ್, ಮಲ್ಲಿಕಾರ್ಜುನ, ತಿಪ್ಪೇಸ್ವಾಮಿ ತೆರವು ಕಾರ್ಯಕ್ರಮದಲ್ಲಿ ಭಾಗವಹಿಸಿದರು.