ಭರಮಸಾಗರ: ಬಡವರ ಬಗ್ಗೆ ಕಾಳಜಿ ಇಲ್ಲದವರ ದೇವಪೂಜೆ ಕಾಟಾಚಾರದಿಂದ ಕೂಡಿರುತ್ತದೆ. ಅಂತಃಕರಣದಿಂದ ಕೂಡಿದ ಪೂಜೆಯೇ ನಿಜವಾದ ಪೂಜೆ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದೇ ನಿಜವಾದ ಪೂಜೆ. ಅಂತೆಯೇ ಬಡವರಿಗೆ ಸಹಾಯ ಮಾಡಿರಿ ಎಂದು ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶ್ರೀಗಳು ಕರೆ ನೀಡಿದರು.
ಸಮೀಪದ ಕೊಳಹಾಳು ಗ್ರಾಮದಲ್ಲಿ ಶಿವಾನುಭವ ಸಮಿತಿ ಆಯೋಜಿಸಿದ್ದ ಶ್ರಾವಣ ಸಂಜೆ, ಶರಣ ಶರಣೆಯರ ತಾತ್ವಿಕ ಚಿಂತನಗೋಷ್ಠಿ ಸಾನ್ನಿಧ್ಯ ವಹಿಸಿ ಪ್ರವಚನ ನೀಡಿದರು.
ಇಷ್ಟಲಿಂಗ ಪೂಜೆ ಎಂಬುದು ಅರಿವಿನ ಪೂಜೆ. ನಮ್ಮೊಳಗಿನ ಅರಿವೇ ಗುರು. ಆ ಗುರುವೇ ದೇವರು. ಇಷ್ಟಲಿಂಗವೆಂಬುದು ಆ ಅರಿವಿನ ಕುರುಹು ಮಾತ್ರ. ಇಷ್ಟಲಿಂಗ ಪೂಜಕ ಆ ಕುರುಹನ್ನು ಹಿಡಿದು ತಮ್ಮೊಳಗಿನ ಘನದ ಪೂಜೆಯನ್ನು ಮಾಡಬೇಕಾಗುತ್ತದೆ ಎಂದರು.
ಹಿರಿಯೂರು ಪ್ರ.ದ. ಕಾಲೇಜು ಪ್ರಾಧ್ಯಾಪಕ ಶಿವಲಿಂಗಪ್ಪ ವಿಷಯ ಮಂಡನೆ ಮಾಡಿ, ಸಮಾಜದ ಒಳಿತಿಗಾಗಿ ಟೀಕಾಪ್ರಹಾರದ ವಚನಗಳ ಮೂಲಕ ಶಿವಶರಣ ಅಂಬಿಗರ ಚೌಡಯ್ಯ ಕಾಯಕ ದಾಸೋಹ ಜೀವಿಯಾಗಿದ್ದರೆಂದು ತಿಳಿಯುತ್ತದೆ ಎಂದು ವಿಷಯ ಮಂಡಿಸಿದರು.
ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಮಾತನಾಡಿ, ಬಸವಾದಿ ಶಿವಶರಣರ ವಚನಗಳು ಸರ್ವಕಾಲಕ್ಕೂ ಸಿದ್ಧೌಷಧವಾಗಿವೆ. ಸಾಮಾಜಿಕ ಪಿಡುಗುಗಳ ನಿರ್ಮೂಲನೆಗಾಗಿ ಬಸವಣ್ಣ ಅವರು ಹೇಳಿದ ಸಪ್ತಸ್ತೋತ್ರದ ವಚನಗಳು ಪಾಲಿಸಬೇಕಾಗಿದೆ. ವೈಜ್ಞಾನಿಕ ಪ್ರಜ್ಞೆ ಬಿತ್ತಿದ ವಿಶ್ವ ಕುಟುಂಬ ಬಸವಣ್ಣ ಪ್ರಮುಖರಾಗಿದ್ದರು ಎಂದರು. ಎಸ್‌ಎಸ್‌ಎಲ್‌ಸಿ, ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೆದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಾಣೇಹಳ್ಳಿ ಶಿವ ಸಂಚಾರ ತಂಡದವರಿಂದ ವಚನ ಗೀತೆ ಗಾಯನ ಏರ್ಪಡಿಸಲಾಗಿತ್ತು.
ಆರ್.ಜಿ.ಬಿ. (ಇಪ್ಕೋ) ಎಚ್.ಎಂ. ಮಂಜುನಾಥಪ್ಪ, ತಾಪಂ ಅಧ್ಯಕ್ಷ ಎನ್.ಟಿ. ರಾಜ್‌ಮಾರ್, ಉಪಾಧ್ಯಕ್ಷ ರಂಗಮ್ಮ, ಮುಖಂಡರಾದ, ವೀರಭದ್ರಪ್ಪ, ಮೌನೇಶ್, ಶೈಲೇಶ್, ಕರಿಬಸಪ್ಪ, ಗ್ರಾಪಂ ಅಧ್ಯಕ್ಷ ಗೋಣಿ ಬಸಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಎಚ್.ಎನ್. ಹನುಮಂತಪ್ಪ, ಇತರರು ಇದ್ದರು.