ಉಡುಪಿ: ನಾವು ಅನುಭವಿಸುತ್ತಿರುವ ಈ ನೆಲ- ಜಲ- ಬದುಕು ನಮ್ಮ ಮುಂದಿನ ಜನಾಂಗದ್ದಾಗಿದ್ದು, ಅದನ್ನು ಹಾಳುಗೈಯ್ಯದೆ ಉಳಿಸಿಕೊಂಡು ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವುದು ನಮ್ಮ ಕರ್ತವ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಇಲ್ಲಿನ ಸಿಪಿಸಿ ಬಡಾವಣೆಯಲ್ಲಿ ಉಡುಪಿ ನಗರಸಭೆ ವತಿಯಿಂದ ನಿರ್ಮಿಸಲಾದ ನೂತನ ವಾಕ್ ವೇ ಮತ್ತು ಮಕ್ಕಳ ಆಟದ ಪಾರ್ಕ್ ಉದ್ಘಾಟಿಸಿ ಅವರು ಮಾತನಾಡಿದರು. ಉಡುಪಿ ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಪಂ ಅಧ್ಯಕ್ಷ ಉಪೇಂದ್ರ ನಾಯಕ್, ಉಡುಪಿ ನಗರಸಭೆ ಅಧ್ಯಕ್ಷ ಕಿರಣ್ ಕುಮಾರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಸಭಾ ಸದಸ್ಯೆ ವಸಂತಿ ಶೆಟ್ಟಿ, ಪೌರಾಯುಕ್ತ ಗೋಕುಲದಾಸ ನಾಯಕ್ ಅತಿಥಿಗಳಾಗಿ ಭಾಗವಹಿಸಿದ್ದರು. ಸಿಪಿಸಿ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಯಗಣೇಶ್ಬೀಡು ಮಾತನಾಡಿದರು. ಖಜಾಂಚಿ ಡಾ. ನಾಗರತ್ನ ಶಾಸ್ತ್ರಿ ಸ್ವಾಗತಿಸಿದರು, ಉಪಾಧ್ಯಕ್ಷ ಭಾಸ್ಕರ್ ಅಮೀನ್ ನಿರೂಪಿಸಿದರು. ಡಾ. ದಯಾನಂದ ಪೈ ವಂದಿಸಿದರು.