ಸುಬ್ರಹ್ಮಣ್ಯ: ಸತತ ಮಳೆಯ ಪರಿಣಾಮ ಕುಮಾರಧಾರವು ತುಂಬಿ ಹರಿಯುತ್ತಿದ್ದು, 3 ದಿನಗಳಲ್ಲಿ ಮುಳುಗಡೆಗೊಂಡು ಸಂಚಾರಕ್ಕೆ ತೊಡಕುಂಟಾಗಿದ್ದು, ಶನಿವಾರ ನೆರೆ ಪ್ರಮಾಣದಲ್ಲಿ ಇಳಿಕೆ ಉಂಟಾಗಿ ಸಂಚಾರಕ್ಕೆ ಮುಕ್ತವಾಯಿತು. ಸುಮಾರು 11.30ರ ವೇಳೆಗೆ ಸೇತುವೆಯು ಪ್ರವಾಹ ನೀರಿನಿಂದ ಹೊರಬಂದು ಸಂಚಾರ ಸುಗಮವಾಯಿತು.
ಕುಕ್ಕೆಸುಬ್ರಹ್ಮಣ್ಯ ಸಂಪರ್ಕಿಸುವ ಕುಮಾರಧಾರ ಸೇತುವೆಯು ಗುರುವಾರ, ಶುಕ್ರವಾರ ಮತ್ತು ಶನಿವಾರ ಮುಳುಗಡೆಗೊಂಡಿತು. ಗುರುವಾರ ರಾತ್ರಿ 8.30ರ ಸುಮಾರಿಗೆ ಮುಳುಗಡೆಗೊಂಡಿದ್ದು, ಶುಕ್ರವಾರ ರಾತ್ರಿ 2.30 ಗಂಟೆಗೆ ನೀರಿನ ಮಟ್ಟ ಕಡಿಮೆಯಾಗಿ ಪ್ರವಾಹದಿಂದ ಮುಕ್ತಿ ಪಡೆಯಿತು. ಮತ್ತೆ ಮಳೆ ಮುಂದುವರಿದು ಮಳೆಯ ಪ್ರಮಾಣ ಅಧಿಕಗೊಂಡ ಕಾರಣ ಶನಿವಾರ ಮುಂಜಾನೆ 7.30ಕ್ಕೆ ಸೇತುವೆ ಮತ್ತೆ ಪ್ರವಾಹದಲ್ಲಿ ಮುಳುಗಡೆಯಾಯಿತು. ಮಧ್ಯಾಹ್ನ 11.30ರ ವೇಳೆಗೆ ಸಂಚಾರಕ್ಕೆ ಅನುವಾಯಿತು.
ಸತತ ಮುಳುಗಡೆಯಿಂದಾಗಿ ಸುಬ್ರಹ್ಮಣ್ಯ- ಮಂಗಳೂರು ರಾಜ್ಯ ಹೆದ್ದಾರಿಯ ಸಂಚಾರವು ಸ್ಥಗಿತಗೊಂಡಿತು. ಸೇತುವೆಯು ಮುಳುಗಡೆಗೊಂಡು ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸೇತುವೆಯ ಎರಡು ಬದಿಗಳಲ್ಲಿ ಕ್ಷೇತ್ರದಿಂದ ತೆರಳುವ ಹಾಗೂ ಕ್ಷೇತ್ರಕ್ಕೆ ಆಗಮಿಸುವ ಭಕ್ತರು, ಅವರನ್ನು ಕರೆತಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸುಬ್ರಹ್ಮಣ್ಯ ಮಾತ್ರವಲ್ಲದೆ ಘಟ್ಟ ಪ್ರದೇಶದಲ್ಲಿ ಸುರಿದ ಮಳೆಯು ಕುಮಾರಧಾರದಲ್ಲಿ ನೀರು ಅಧಿಕಗೊಳ್ಳುವಂತೆ ಮಾಡಿತ್ತು.
ಪುಣ್ಯ ನದಿ ಕುಮಾರಧಾರ ತುಂಬಿ ಹರಿಯುತ್ತಿರುವುದರಿಂದ ಕುಮಾರಧಾರ ಸ್ನಾನಘಟ್ಟವು ಶನಿವಾರ ಮುಳುಗಡೆಯಾಗಿತ್ತು. ಸ್ನಾನಘಟ್ಟದ ಪಕ್ಕದಲ್ಲಿದಲ್ಲಿದ್ದ ಅಂಗಡಿಗಳಿಗೆ ನೀರು ನುಗ್ಗಿತ್ತು.